ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ – ಶಾಲೆಗಳು ಎಂದಿನಂತೆ ಓಪನ್ : ಇಲಾಖೆ ಕಮೀಷನರ್ ಪ್ರಕಟಣೆ
ನ್ಯೂಸ್ ಆ್ಯರೋ : ಹಗರಣಗಳ ಆರೋಪದಲ್ಲಿ ಬಳಲಿ ಬೆಂಡಾಗಿರುವ ರಾಜ್ಯ ಸರ್ಕಾರಕ್ಕೆ ಇದೀಗ ರಾಜ್ಯದ ಶಿಕ್ಷಕರ ಪ್ರತಿಭಟನೆಯ ಬಿಸಿ ತಾಗಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ತರಗತಿ ಬಹಿಷ್ಕರಿಸಿ ಬೆಂಗಳೂರಿನಲ್ಲಿ ಇಂದು ಬೃಹತ್ ಪ್ರತಿಭಟನೆ ಕೈಗೊಂಡಿದ್ದಾರೆ.
ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲಿಸುವಂತೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕರೆ ನೀಡಿದ್ದು, ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಆಗಮಿಸಲು ಶಿಕ್ಷಕರಿಗೆ ಮನವಿ ಮಾಡಿಕೊಂಡಿದೆ.
2016ರ ಮೊದಲು ನೇಮಕವಾದ ಶಿಕ್ಷಕರಿಗೆ 2017ರ ಹೊಸ ವೃಂದ ಮತ್ತು ನೇಮಕಾತಿಗಳನ್ನು ಅನ್ವಯಿಸದೆ ಒಂದರಿಂದ ಎಂಟನೇ ತರಗತಿವರೆಗೆ ಬೋಧನೆಗೆ ಅವಕಾಶ ನೀಡಬೇಕು. ಪದವಿ ಪೂರ್ಣಗೊಳಿಸಿದ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಪ್ರೌಢಶಾಲಾ ಶಿಕ್ಷಕರಾಗಿ ಭರ್ತಿಗೆ ಅವಕಾಶ ಕಲ್ಪಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಹಿಂದಿನಂತೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸೋಮವಾರ ಬೆಳಗ್ಗೆ 10.30 ರಿಂದ ಸಂಜೆ 5:00 ವರೆಗೆ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿದೆ.
ಶಾಲೆಗಳಿಗೆ ರಜೆ ಇಲ್ಲ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಇಂದು ‘ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ’ಯನ್ನು ನಡೆಸುತ್ತಿರುವುದು ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆ.12ರಂದು ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟನೆ ಹೊರಡಿಸಿದ್ದಾರೆ.
Leave a Comment