ಸಾರ್ವಜನಿಕ ಸ್ಥಳದಲ್ಲೇ ಮಹಿಳೆಯ ಮೇಲೆ ಅತ್ಯಾಚಾರ; ವಿಡಿಯೋ ವೈರಲ್
ನ್ಯೂಸ್ ಆ್ಯರೋ : ದಿನೇ ದಿನೇ ದೇಶದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಶೋಚನೀಯ ಘಟನೆಗಳು ಹೆಚ್ಚುತ್ತಲಿವೆ. ಇಂತಹ ಘಟನೆಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಒಂದರ ಹಿಂದೆ ಒಂದರಂತೆ ವೈರಲ್ ಆಗುತ್ತಿದೆ.
ಮಧ್ಯಪ್ರದೇಶ ಉಜ್ಜಯಿನಿಯಲ್ಲಿ ಜನನಿಬಿಡ ಪ್ರದೇಶವಾದ ಕೋಯ್ಲಾ ಪಾಠಕ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಹಾಡಹಗಲೇ ಸಾರ್ವಜನಿಕವಾಗಿಯೇ ದುಷ್ಕರ್ಮಿಯೋರ್ವ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ವರದಿಯಾಗಿದೆ.
ಈ ಘಟನೆಯನ್ನು ಅಲ್ಲೇ ಇದ್ದ ಸಾರ್ವಜನಿಕರು ಕಂಡರೂ ಸಹ, ತಡೆಯಲು ಮುಂದಾಗಲಿಲ್ಲ. ಅಲ್ಲದೆ ಈ ಅತ್ಯಾಚಾರದ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಸಂತ್ರಸ್ತ ಮಹಿಳೆಯಿಂದ ಆರೋಪಿಯ ಮಾಹಿತಿಯನ್ನು ಪಡೆದುಕೊಂಡಿದ್ದು, ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ ಆರೋಪಿ ಲೋಕೇಶ್. ಮಹಿಳೆಗೆ ಮದ್ಯ ಸೇವಿಸುವಂತೆ ಬಲವಂತಪಡಿಸಿ, ಅಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಸಂತ್ರಸ್ತೆಗೆ ಬೆದರಿಕೆ ಒಡ್ಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆಯು ಹೇಳಿಕೆ ನೀಡಿದ್ದಾಳೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಜ್ಜಯಿನಿ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮ, ಆರೋಪಿ ಲೋಕೇಶ್ನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ‘ಮಧ್ಯಪ್ರದೇಶದಲ್ಲಿ ಬಿಜೆಪಿಯ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
Leave a Comment