ಕಳ್ಳತನಕ್ಕೆ ಬಂದು ಮದ್ಯಕ್ಕೆ ಮನಸೋತ ಕಳ್ಳ; ಮುಂದಾಗಿದ್ದು ಬಲು ರೋಚಕ
ನ್ಯೂಸ್ ಆ್ಯರೋ: ಮದ್ಯವನ್ನು ನೋಡಿದ್ರೆ ಕೆಲವರಿಗೆ ಕಂಟ್ರೋಲ್ ಮಾಡಿಕೊಳ್ಳಲು ಆಗೋದೇ ಇಲ್ಲ. ಒಂದೆರಡು ಗುಟುಕು ಗಂಟಲಿಗೆ ಇಳಿಯೋವರೆಗೂ ಸಮಾಧಾನ ಆಗಲ್ಲ ಅನ್ನೋದು ಎಣ್ಣೆಪ್ರಿಯರ ಮನದಾಳದ ಮಾತು. ಒಂದಿಷ್ಟು ಜನರಂತೂ ಹಗಲಾಗಲಿ, ರಾತ್ರಿಯಾಗಲಿ ಅವರಿಗೆ ಮದ್ಯ ಬೇಕು. ಕುಡಿಯಬೇಕು ಅನ್ನಿಸಿದಾಗ ಒಂದು ಪೆಗ್ ಏರಿಸುತ್ತಾರೆ. ಇದೀಗ ಇಂತಹುವುದೇ ಒಂದು ಘಟನೆ ನಡೆದಿದ್ದು, ಕಳ್ಳತನಕ್ಕೆ ಹೋಗಿದ್ದ ಕಳ್ಳ ಅಲ್ಲಿಯ ಮದ್ಯ ಕುಡಿದು ಬೆಳಗ್ಗೆಯವರೆಗೂ ಗೊರಕೆ ಹೊಡೆಯುತ್ತಾ ಮಲಗಿದ್ದಾನೆ.
ಈ ಘಟನೆ ತೆಲಂಗಾಣದ ಮೆದಕ್ ಜಿಲ್ಲೆಯಲ್ಲಿ ನಡೆದಿದೆ. ಕನಕದುರ್ಗ ಹೆಸರಿನ ಕಳ್ಳನೋರ್ವ ರಾತ್ರಿ ಮದ್ಯದಂಗಡಿಗೆ ಎಂಟ್ರಿ ಕೊಟ್ಟಿದ್ದಾನೆ. ಆದರೆ ಅಲ್ಲಿಗೆ ಹೋದ ನಂತರ ಆತನ ಲಕ್ಷ್ಯವೆಲ್ಲಾ ಮದ್ಯದ ಬಾಟೆಲ್ ಮೇಲೆ ಹೋಗಿದೆ. ಕಳ್ಳತನಕ್ಕೆ ಬಂದವ ಮೊದಲು ಒಂದು ಬಿಯರ್ ಬಾಟೆಲ್ ಓಪನ್ ಮಾಡಿ ಕುಡಿದಿದ್ದಾನೆ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಕನಕದುರ್ಗ, ಬೇರೆ ಬೇರೆಯ ಬ್ರ್ಯಾಂಡ್ ಬಾಟೆಲ್ ಓಪನ್ ಮಾಡಿ ಮದ್ಯ ಕುಡಿದಿದ್ದಾನೆ. ಕುಡಿದ ನಶೆಯಲ್ಲಿ ಅಲ್ಲೇ ಮಲಗಿದ್ದಾನೆ.
ಮೇಲ್ಛಾವಣಿಯ ಮೆಟ್ಟಿಲುಗಳಿಂದ ಇಳಿದು ಬಾರ್ ಒಳಗೆ ಬಂದ ಕಳ್ಳ ಮೊದಲು ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾನೆ. ನಂತರ ಅಲ್ಲಿದ್ದ ಹಣ ಮತ್ತು ನಾಲ್ಕೈದು ಮದ್ಯದ ಬಾಟೆಲ್ ಎತ್ತುಕೊಂಡಿದ್ದಾನೆ. ಆದ್ರೆ ಅಲ್ಲಿಂದ ಹೋಗದೇ ಅಲ್ಲಿಯೇ ಕುಳಿತು ಕುಡಿಯಲು ಆರಂಭಿಸಿದ್ದಾನೆ. ಅಂಗಡಿಯಿಂದ ಹೊರಗೆ ಹೋಗಲಾರದಷ್ಟು ಕುಡಿದು ನಿದ್ದೆ ಮಾಡಿದ್ದಾನೆ.
ಬೆಳಗ್ಗೆ ಅಂಗಡಿ ಮಾಲೀಕ ಮತ್ತು ಕೆಲಸಗಾರರು ಕಳ್ಳ ಮಲಗಿರೋದನ್ನು ಗಮನಿಸಿ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮದ್ಯದಂಗಡಿಯಲ್ಲಿ ಕುಡಿದು ಮಲಗಿದ ಕಳ್ಳನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಳ್ಳ ಅಲ್ಲಿದ್ದ ಹಣ ಮತ್ತು ಮದ್ಯದ ಬಾಟಲಿಗಳನ್ನು ಪಾಲಿಥಿನ್‌ನಲ್ಲಿ ತುಂಬಿಕೊಂಡಿದ್ದಾನೆ. ಅಲ್ಲಿಂದ ಹೊರಗೆ ಬರುವಾಗ ಮದ್ಯಕ್ಕೆ ಮನಸೋತು ಕಂಠಪೂರ್ತಿ ಕುಡಿದಿದ್ದಾನೆ. ಹಾಗಾಗಿ ಅವನಿಗೆ ಅಲ್ಲಿಂದ ಹೋಗಲು ಸಾಧ್ಯವಾಗದೇ ಮಲಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Leave a Comment