
ಯಮಹಾ R15 ಬೈಕ್ ನಲ್ಲಿ ಝೊಮ್ಯಾಟೋ ಫುಡ್ ಡೆಲಿವರಿ ಸುಂದರಿಯ ಜಾಲಿ ರೈಡ್ – ನೆಟ್ಟಿಗರು ಗರಂ ಆಗಿದ್ದೇಕೆ?
- ವೈರಲ್ ನ್ಯೂಸ್
- October 18, 2023
- No Comment
- 75
ನ್ಯೂಸ್ ಆ್ಯರೋ : ರೀಲ್ ಹುಚ್ಚಾಟದಲ್ಲಿ ಈಗೀನ ಯುವಕ- ಯುವತಿಯರಿಗೆ ತಾವು ಏನು ಮಾಡುತ್ತಿದ್ದೇವೆ, ಅದು ಸರಿಯೋ, ತಪ್ಪೋ ಎನ್ನುವುದನ್ನು ಯೋಚಿಸಲು ಹೋಗುವುದಿಲ್ಲ. ಇದರಿಂದ ಕೆಲವೊಮ್ಮೆ ದೊಡ್ಡದೊಡ್ಡ ಸಂಕಷ್ಟವನ್ನೇ ಎದುರಿಸಬೇಕಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆಯಲು ಏನು ಬೇಕಾದರೂ ಮಾಡಲು ಕೆಲವರು ಸಿದ್ಧವಿದ್ದಾರೆ. ಇದಕ್ಕಾಗಿ ಚಿತ್ರವಿಚಿತ್ರ ವೀಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ. ಇದು ಜನರ ಮನಸ್ಸು ಗೆದ್ದರೆ ಚಿಂತೆ ಇಲ್ಲ. ಆದರೆ ಆಕ್ರೋಶಕ್ಕೆ ಗುರಿಯಾದರೆ ಮುಂದೆ ಬಹುದೊಡ್ಡ ಸಮಸ್ಯೆಯೇ ಬರುವುದು. ಇಂತಹ ಒಂದು ಘಟನೆ ಇಂದೋರ್ ನಲ್ಲಿ ನಡೆದಿದೆ.
ಇಂದೋರ್ ಬೀದಿಯಲ್ಲಿ ಸುಂದರ ಯುವತಿಯೊಬ್ಬಳು ಝೊಮಾಟೊ ಫುಡ್ ಡೆಲಿವರಿ ಹುಡುಗಿಯ ವೇಷ ತೊಟ್ಟು ಯಮಹಾ ಆರ್ 15 ಬೈಕ್ ನಲ್ಲಿ ಓಡಾಡಿದ್ದಾಳೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆಕೆ ಹೆಲ್ಮೆಟ್ ಧರಿಸದ ಕಾರಣಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಕೆಲವರು ಇದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುವ ಪಾಠವನ್ನೂ ಹೇಳಿದ್ದಾರೆ.
ರಾಜೀವ್ ಮೆಹ್ತಾ ಎಂಬವರು ಹಂಚಿಕೊಡಿರುವ ಈ ವಿಡಿಯೋ ದೊಂದಿಗೆ ಅವರು ಇಂದೋರ್ ನಲ್ಲಿ ಝೊಮಾಟೊ ಮಾರ್ಕೆಟಿಂಗ್ ಮುಖ್ಯಸ್ಥರು ಪ್ರಚಾರಕ್ಕಾಗಿ ಮಹಿಳಾ ಮಾಡೆಲ್ ಅನ್ನು ನೇಮಿಸಿದ್ದಾರೆ ಎನ್ನುವ ಶೀರ್ಷಿಕೆಯೊಂದಿಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿರುವ ಹಲವರು ಫುಡ್ ಡೆಲಿವರಿ ಮಾಡುವವರ ಸುರಕ್ಷತೆ ಬಗ್ಗೆ ಝೊಮಟೊ ಕಾಳಜಿ ವಹಿಸುವುದಿಲ್ಲ, ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಲು ಮಾಡೆಲ್ ಅನ್ನು ಒತ್ತಾಯಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ವಿಡಿಯೋ ಭಾರೀ ವೈರಲ್ ಆಗಿ ಝೊಮಾಟೊ ಕಂಪೆನಿಯ ಸಿ.ಇ.ಒ ದೀಪಿಂದರ್ ಗೋಯಲ್ ಅವರನ್ನೂ ತಲುಪಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ಇದಕ್ಕೂ ನಮಗೂ ಸಂಬಂಧವಿಲ್ಲ. ನಾವು ಹೆಲ್ಮೆಟ್ ರಹಿತ ಬೈಕ್ ಚಾಲನೆಯನ್ನು ಅನುಮೋದಿಸುವುದಿಲ್ಲ. ಅಷ್ಟೇ ಅಲ್ಲ ನಾವು ಇಂದೋರ್ ನಲ್ಲಿ ಯಾವುದೇ ಮಾರ್ಕೆಟಿಂಗ್ ಹೆಡ್ ಇಲ್ಲ. ಅಲ್ಲದೇ ಮಹಿಳೆಯರು ಫುಡ್ ಡೆಲಿವರಿ ಮಾಡಿದರೆ ತಪ್ಪೇನಿಲ್ಲ. ಅವರ ಕಾರ್ಯಕ್ಕೆ ನಮಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ. ದೀಪಿಂದರ್ ಗೋಯಲ್ ಅವರ ಸ್ಪಷ್ಟನೆಗೆ ಹಲವಾರು ಮಂದಿ ಧನ್ಯವಾದಗಳನ್ನೂ ಹೇಳಿದ್ದಾರೆ.