ವೈಕುಂಠ ಏಕಾದಶಿಗೆ ಉಪವಾಸ ಮಾಡುವುದೇಕೆ?; ಈ ವರ್ಷ ವೈಕುಂಠ ಏಕಾದಶಿ ಯಾವಾಗ?
ನ್ಯೂಸ್ ಆ್ಯರೋ: ವೈಕುಂಠ ಏಕಾದಶಿಯನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗಿದೆ. ಈ ದಿನವನ್ನು ಶ್ರೀ ಹರಿ ವಿಷ್ಣುವಿಗೆ ಸಮರ್ಪಿಸಲಾಗಿದೆ. ಈ ದಿನದಂದು, ಶ್ರೀ ವಿಷ್ಣುವಿನ ಪೂಜೆ ಮತ್ತು ಉಪವಾಸದ ಸಂಪ್ರದಾಯವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ವೈಕುಂಠ ಏಕಾದಶಿಯಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ, ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಹಾಗೆಯೇ ನೀವು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತೀರಿ.
ವೈಕುಂಠ ಎಂಬ ಹೆಸರಿನ ಅರ್ಥವೇನು? ‘ಕುಂಠ’ ಎಂದರೆ ಅಸಾಮರ್ಥ್ಯ, ‘ವಿಕುಂಠ’ ಎಂದರೆ ಬದುಕಿನ ನಡೆಯಲ್ಲಿ ಎಂದೂ ಜಾರದವರು, ಅಂದರೆ ಸಾಕ್ಷಾತ್ಕಾರವಾಗಿ ಮುಕ್ತಿ ಪಡೆದವರು ಎಂದರ್ಥ. ಬದುಕಿನಲ್ಲಿ ಎದುರಾಗುವ ಅಸಾಮರ್ಥ್ಯಗಳನ್ನು ಹೋಗಲಾಡಿಸುವವನು ಎಂಬುದು ಈ ಹೆಸರಿಗೆ ಇರುವ ಅರ್ಥವಾಗಿದೆ.
ಶರೀರಮಾಧ್ಯಂ ಖಲು ಧರ್ಮಸಾಧನಂ” ಎಂಬ ಮಾತಿನಂತೆ ಯಾವುದೇ ಒಳ್ಳೆಯ, ಧಾರ್ಮಿಕ ಕೆಲಸಗಳನ್ನು ಮಾಡಬೇಕಿದ್ದರೂ ಅದಕ್ಕೆ ದೇಹ ಸದೃಢವಾಗಿರುವುದು ಅತ್ಯಗತ್ಯ. ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಮೂಲಕ ಜೀವನದಲ್ಲಿ ಎದುರಾಗುವ ಅಸಾಮರ್ಥ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಬಹುದು, ಈ ಮೂಲಕ ಪರಮಪದವನ್ನು ಸೇರಬಹುದು ಎಂಬುದು ವೈಕುಂಠ ಏಕಾದಶಿಯ ವ್ರತಾಚರಣೆಯ ಗೂಢಾರ್ಥವಾಗಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ವೈಕುಂಠ ಏಕಾದಶಿಯ ದಿನಾಂಕವು ಜನವರಿ 9 ರಂದು ಮಧ್ಯಾಹ್ನ 12:22 ಕ್ಕೆ ಪ್ರಾರಂಭವಾಗುತ್ತದೆ. ಈ ದಿನಾಂಕವು ಜನವರಿ 10 ರಂದು ಬೆಳಿಗ್ಗೆ 10:19 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ವೈಕುಂಠ ಏಕಾದಶಿಯ ಉಪವಾಸವನ್ನು ಜನವರಿ 10 ರಂದು ಆಚರಿಸಲಾಗುತ್ತದೆ.
ವೈಕುಂಠ ಏಕಾದಶಿಯ ಬಗ್ಗೆ ಹೀಗೊಂದು ಕಥೆ:
ನಂದಗೋಪ ಶ್ರೀಕೃಷ್ಣನ ಸಾನಿಧ್ಯದಲ್ಲಿ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೆ ಆಚರಿಸುತ್ತಿದ್ದ ಒಮ್ಮೆ ಏಕಾದಶಿವ್ರತ ಆಚರಿಸಿ, ಮರುದಿನ ದ್ವಾದಶಿ ಬಹು ಸ್ವಲ್ಪಕಾಲ ಮಾತ್ರ ಇದ್ದುದ್ದರಿಂದ ಬೆಳಗಿನ ಜಾವಕ್ಕೆ ಮೊದಲು ಯಮುನಾನದಿಯಲ್ಲಿ ಸ್ನಾನಕ್ಕಿಳಿದ. ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸ, ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು. ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು, ಗೋಪಾಲಕುಲದವರೆಲ್ಲಾ ಬಲರಾಮಕೃಷ್ಣರಿಗೆ ಈ ಸುದ್ದಿ ಮುಟ್ಟಿಸಿದರು. ಶ್ರೀಕೃಷ್ಣ ತಂದೆಯನ್ನು ಕರೆತರುವುದಾಗಿ ಹೇಳಿ, ವರುಣಲೋಕಕ್ಕೆ ಬಂದನು. ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣ ತನ್ನ ಸೇವಕನಿಂದಾದ ಅಪರಾಧ ಮನ್ನಿಸಬೇಕೆಂದು ಪ್ರಾರ್ಥಿಸಿದ. ಶ್ರೀಕೃಷ್ಣ ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು.
ನಂದಗೋಪನಿಗೆ ಪರಮಾನಂದವಾಯಿತು. ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯಸ್ವಾಗತ ಮುಂತಾದವುಗಳನ್ನು ಎಳೆಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು ಆದರೆ ಶ್ರೀಕೃಷ್ಣ ಸಾಕ್ಷತ್ ಪರಮೇಶ್ವರನೇ ನಿಜ ಆದರೆ ಅವನ ನಿಜರೂಫ ಅರಿಯಲಾರೆವು ಎಂದು ಪರಿತಪಿಸಿದರು. ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ತಿಳಿಸಿದ, ಕೃಷ್ಣ ಹೇಳಿದಂತೆ ಮಾಡಿದ ಅವರಿಗೆ ವೈಕುಂಠದ ದರ್ಶನವಾಯಿತು. ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು ಎಲ್ಲರೂ ಧನ್ಯರಾದರು ಬಹುಶಃ ಈ ಕಾರಣಕ್ಕೆ ಏಕಾದಶಿಯನ್ನು “ವೈಕುಂಠಏಕಾದಶಿ” ಎಂದು ಕರೆದಿರಬಹುದೆಂಬ ನಂಬಿಕೆ ಹಲವರಲ್ಲಿದೆ.
ವೈಕುಂಠ ಏಕಾದಶಿಯ ಉಪವಾಸವನ್ನು ಏಕೆ ಆಚರಿಸಲಾಗುತ್ತದೆ?:
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ವೈಕುಂಠ ಏಕಾದಶಿಯಂದು ಯಾರು ಉಪವಾಸ ಮಾಡುತ್ತಾರೋ ಅವರ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಉಪವಾಸ ಮತ್ತು ಪೂಜೆ ಮಾಡುವವರಿಗೆ ವಿಷ್ಣುವಿನ ವಿಶೇಷ ಅನುಗ್ರಹ ಸಿಗುತ್ತದೆ. ಈ ದಿನದಂದು ಉಪವಾಸ ಮಾಡುವವರ ಮನಸ್ಸು ಶುದ್ಧವಾಗುತ್ತದೆ. ಅವರು ಜೀವನದಲ್ಲಿ ಎಲ್ಲಾ ರೀತಿಯ ಐಷಾರಾಮಿಗಳನ್ನು ಪಡೆಯುತ್ತಾರೆ. ಜೀವನದ ಎಲ್ಲಾ ಸುಖಗಳನ್ನು ಅನುಭವಿಸಿದ ನಂತರ ಅವರು ಮರಣಾನಂತರ ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
ವೈಕುಂಠ ಏಕಾದಶಿಯ ಧಾರ್ಮಿಕ ಮಹತ್ವ:
ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ವೈಕುಂಠ ಏಕಾದಶಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಭಗವಾನ್ ವಿಷ್ಣುವನ್ನು ಪೂಜಿಸುವುದು ಮತ್ತು ಉಪವಾಸ ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ. ಈ ದಿನದಂದು ಉಪವಾಸ ಮತ್ತು ಪೂಜೆ ಮಾಡುವವರಿಗೆ ಪ್ರಾಪಂಚಿಕ ಸುಖ ಸಿಗುವುದಲ್ಲದೆ, ಜನನ ಮರಣ ಚಕ್ರದಿಂದ ಮುಕ್ತಿಯೂ ಸಿಗುತ್ತದೆ. ವೈಕುಂಠ ಏಕಾದಶಿಯಂದು ಉಪವಾಸ ಮಾಡುವವರಿಗೆ ಸ್ವರ್ಗದ ಹಾದಿ ಸುಲಭವಾಗುತ್ತದೆ.
Leave a Comment