ಒಂದೂವರೆ ಗಂಟೆಯಲ್ಲಿ 6 ಬಾರಿ ಕಂಪಿಸಿದ ಭೂಮಿ; ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪಕ್ಕೆ 32 ಜನ ಸಾವು

Earthquake
Spread the love

ನ್ಯೂಸ್ ಆ್ಯರೋ: ಟಿಬೆಟ್ ಮತ್ತು ನೇಪಾಳದ ಗಡಿಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ 7.1 ತೀವ್ರತಿಯ ಪ್ರಭಲ ಭೂಕಂಪನವು ಭಾರೀ ಹಾನಿಯನ್ನುಂಟುಮಾಡಿದೆ. ಟಿಬೆಟ್-ನೇಪಾಳ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಿಂದ 32 ಜನರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎಎಫ್‌ಪಿ) ವರದಿ ಮಾಡಿದೆ. ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ, ಹಲವು ಕಟ್ಟಡಗಳು ನೆಲಕ್ಕುರುಳಿವೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಚೀನಾದ ಕ್ಸಿನ್‌ಹುವಾ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಭೂಕಂಪದ ನಂತರದ ಅವಶೇಷಗಳ ನಡುವೆ ಟಿಬೆಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ, ಚೀನಾದ ಸ್ಟೇಟ್ ಕೌನ್ಸಿಲ್, ಟಿಬೆಟ್ ಪ್ರದೇಶಕ್ಕೆ ರಾಷ್ಟ್ರೀಯ ಕಾರ್ಯಪಡೆಯನ್ನು ಕಳುಹಿಸಿದೆ ಮತ್ತು ಲೆವೆಲ್-3 ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಚೀನಾದ ಸಿಸಿಟಿವಿ ಸುದ್ದಿ ವೆಬ್‌ಸೈಟ್ ಹೇಳಿದೆ.

ಒಂದೂವರೆ ಗಂಟೆ ಅವಧಿಯೊಳಗೆ ಆರು ಭೂಕಂಪ ಸಂಭವಿಸಿವೆ ಎಂದು ಹೇಳಲಾಗಿದೆ. ಬೆಳಗ್ಗೆ 6:35ಕ್ಕೆ ಸಂಭವಿಸಿದ 7.1 ತೀವ್ರತೆಯ ಭೂಕಂಪದ ನಂತರವೂ ಕಂಪನಗಳು ನಿಂತಿಲ್ಲ. ಒಂದರ ಹಿಂದೆ ಒಂದರಂತೆ ಭೂಕಂಪನದಿಂದ ಜನರು ಭಯಭೀತರಾಗಿದ್ದಾರೆ. ಟಿಬೆಟ್‌ನ ದೂರದ ಹಿಮಾಲಯ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ ನಂತರ “ಜನರು ಸಾವನ್ನಪ್ಪಿದ್ದಾರೆ” ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ, ನೆರೆಯ ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಭಾರತದ ಹಲವಾರು ಭಾಗಗಳಲ್ಲಿ ಸಹ ಕಂಪನಗಳು ಸಂಭವಿಸಿವೆ.

ಎರಡನೇ ಕಂಪನವು ಚೀನಾದ ಕ್ಸಿಜಾಂಗ್‌ನಲ್ಲಿ 7:02 ಸಂಭವಿಸಿದ್ದು, ಇದರ ತೀವ್ರತೆ 4.7 ಆಗಿತ್ತು. ನಂತರ 07:07 ಕ್ಕೆ ಮೂರನೇ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ 4.9 ಆಗಿತ್ತು. ನಾಲ್ಕನೇ ಭೂಕಂಪವು 7:13ಕ್ಕೆ ಮತ್ತು ಐದನೇ ಭೂಕಂಪವು 7:29 ಕ್ಕೆ 4.9ರ ತೀವ್ರತೆಯೊಂದಿಗೆ ಸಂಭವಿಸಿದ್ರೆ, ಆರನೇ ಬಾರಿ 4.8ರ ತೀವ್ರತೆಯ ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.

ಇನ್ನು ಮಂಗಳವಾರ ಬೆಳಗ್ಗೆ 6:35ಕ್ಕೆ ಉತ್ತರ ಭಾರತದಾದ್ಯಂತ ಪ್ರಬಲ ಭೂಕಂಪನದ ಅನುಭವವಾಗಿದೆ. ಭಾರತ ಮಾತ್ರವಲ್ಲದೆ ನೇಪಾಳ, ಬಾಂಗ್ಲಾದೇಶ ಮತ್ತು ಚೀನಾ ಕೂಡ ಇದರ ಪ್ರಭಾವಕ್ಕೆ ಒಳಗಾಗಿದೆ. ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ ಚಳಿಯ ರಾತ್ರಿಯಲ್ಲಿ ಮನೆಯಲ್ಲಿ ಮಲಗಿದ್ದವರು ನಿದ್ದೆ ಕಳೆದುಕೊಂಡಿದ್ದಾರೆ. ಕೆಲವು ಪ್ರದೇಶಗಳಲ್ಲಿ ಜನರು ಭಯದಿಂದ ಮನೆಯಿಂದ ಹೊರಬಂದು ರಸ್ತೆಯಲ್ಲೇ ಕಾಲ ಕಳೆದಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!