
ಶತಕದತ್ತ ಮುನ್ನುಗ್ಗುತ್ತಿದೆ ಈರುಳ್ಳಿ ಬೆಲೆ – ಟೊಮೆಟೊ ಬೆನ್ನಲ್ಲೇ ಕಣ್ಣೀರು ತರಿಸಿದ ಈರುಳ್ಳಿ
- ಕರ್ನಾಟಕಟಾಪ್ ನ್ಯೂಸ್
- October 31, 2023
- No Comment
- 86
ನ್ಯೂಸ್ ಆ್ಯರೋ : ಅಡುಗೆ ಮನೆಗಳಲ್ಲಿ ಯಾವಾಗಲೂ ಬೇಕಾಗಿರುವ ಈರುಳ್ಳಿಯ ಬೆಲೆ ರಾಜ್ಯದಲ್ಲಿ ಶತಕದತ್ತ ತಲುಪುತ್ತಿದೆ. ಟೊಮೆಟೋ ದರ ಶತಕ ಬಾರಿಸಿದ ಬೆನ್ನಲ್ಲೇ ಇದೀಗ ಈರುಳ್ಳಿ ದರ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.
ಮಳೆ ಅಭಾವದಿಂದಾಗಿ ಇಳುವರಿ ಕುಸಿತದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದೆ. ಕಳೆದ ತಿಂಗಳೇ ಈರುಳ್ಳಿ ಬೆಲೆ ಗಗನಕ್ಕೇರಲಿದೆ ಎನ್ನುವ ಸುಳಿವು ನೀಡಲಾಗಿತ್ತು. ಆದ್ರೆ ಕೇಂದ್ರ ಸರ್ಕಾರ ಈರಳ್ಳಿ ರಫ್ತಿಗೆ ಲಗಾಮು ಹಾಕಿತ್ತು.
ಹೆಚ್ಚೆಚ್ಚು ದಾಸ್ತಾನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಬೆಲೆ ಹೆಚ್ಚಾಗದಂತೆ ನೋಡಿಕೊಂಡಿತ್ತು. ಆದ್ರೆ, ಇದೀಗ ಮಳೆ ಅಭಾವದಿಂದ ನಿರೀಕ್ಷಿತ ಫಸಲು ಬಾರದ ಕಾರಣ, ಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಆಮದು ಆಗದಿರೋ ಹಿನ್ನೆಲೆ ಈರುಳ್ಳಿ ದರವು ಗಗನಕ್ಕೇರುತ್ತಿದೆ. ಕಳೆದ ವಾರ ಪ್ರತಿ ಕೆಜಿಗಿ 30ರಿಂದ 40ರೂಪಾಯಿ ಇದ್ದ ಈರುಳ್ಳಿ ಇದೀಗ ಏಕಾಏಕಿ 80 ರಿಂದ 90 ರೂಪಾಯಿಗೆ ತಲುಪಿದೆ.
ಬೆಂಗಳೂರು ನಗರದಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕೆಜಿಗೆ 80 ರಿಂದ 90 ರೂಪಾಯಿಗೆ ತಲುಪಿದೆ. ಇನ್ನೂ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಕೆಲ ಪ್ರದೇಶಗಳಲ್ಲಿ ಬಿತ್ತನೆ ವಿಳಂಬವಾಗಿ, ಫಸಲು ಬಾರದ ಕಾರಣ ಬೆಲೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರವು ಶೇ. 57ರಷ್ಟು ಹೆಚ್ಚಳವಾಗಿದೆ.
ಯಶವಂತಪುರ ಎಪಿಎಂಸಿಯಲ್ಲಿ ಪ್ರತಿ ಕೆ.ಜಿ ₹60 ರಿಂದ ₹65 ಇದೆ. ನ್ಯೂ ತರಗುಪೇಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ ₹75ರಿಂದ ₹90 ಇದೆ. ಹಾಪ್‌ಕಾಮ್ಸ್‌ಗಳಲ್ಲಿ ಕೆ.ಜಿ ಈರುಳ್ಳಿಯನ್ನು 70 ರಿಂದ 88 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿಗೆ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಲೋಡ್ ಈರುಳ್ಳಿ ಬರುತ್ತಿತ್ತಂತೆ. ಆದರೆ ಇದೀಗ ದಿನಕ್ಕೆ 100ರಿಂದ 200 ಲೋಡ್ ಮಾತ್ರ ಬರುತ್ತಿದೆ. ವ್ಯಾಪಾರಸ್ಥರು ಹೇಳುವ ಪ್ರಕಾರ ಇನ್ನೂ ಒಂದೆರಡು ತಿಂಗಳು ಈರುಳ್ಳಿ ಬೆಲೆ ಕಡಿಮೆಯಾಗುವುದು ಅನುಮಾನ ಎನ್ನಲಾಗಿದೆ.
ರಾಜ್ಯದ ನಾನಾ ಜಿಲ್ಲೆಗಳ ಈರುಳ್ಳಿ ದರ ಹೀಗಿದೆ:
ಚಿತ್ರದುರ್ಗ -ಕೆ.ಜಿಗೆ 60 ರಿಂದ 70 ರೂ.
ಕಲಬುರಗಿ, ಬೀದರ್, ಯಾದಗಿರಿ -ಕೆ.ಜಿಗೆ 60-80 ರೂ.
ರಾಯಚೂರು, ಕೊಪ್ಪಳ -ಕೆ.ಜಿಗೆ 60-80ರೂ
ಧಾರವಾಡ, ವಿಜಯಪುರ -ಕೆ.ಜಿಗೆ 70-80 ರೂ
ದಕ್ಷಿಣ ಕನ್ನಡ -ಕೆ.ಜಿಗೆ 80-90 ರೂ
ಉಡುಪಿ, ಚಿಕ್ಕಮಗಳೂರು -ಕೆ.ಜಿಗೆ 70-80 ರೂ
ಮೈಸೂರು, ಮಂಡ್ಯ -ಕೆ.ಜಿಗೆ 80-90 ರೂ
ಒಟ್ಟಿನಲ್ಲಿ ಟೊಮೆಟೊ ಬೆಲೆ ಏರಿಕೆಯಿಂದ ಕೈಸುಟ್ಟುಕೊಂಡಿದ್ದ ಗ್ರಾಹಕರಿಗೆ ಇದೀಗ ಈರುಳ್ಳಿ ಬೆಲೆ ಏರಿಕೆ ಕಣ್ಣೀರು ತರಿಸುತ್ತಿದ್ದು, ಸಹಜವಾಗಿಯೇ ಜೇಬಿಗೆ ಕತ್ತರಿ ಬಿದ್ದಂತಾಗಿದೆ.