
ಕರಾವಳಿಯ ಹಲವು ಚಿನ್ನಾಭರಣ ಅಂಗಡಿಗಳ ಮೇಲೆ ಐಟಿ ರೈಡ್ – ಬೀಗ ಹಾಕಿ ಒಳಗಿನಿಂದಲೇ ಶೋಧ ಕಾರ್ಯ, ಹೈರಾಣಾದ ಮಾಲೀಕರು..!
- ಕರಾವಳಿ
- October 31, 2023
- No Comment
- 137
ನ್ಯೂಸ್ ಆ್ಯರೋ : ಇಂದು ಮುಂಜಾನೆಯಿಂದಲೇ ಕರ್ನಾಟಕ ಕರಾವಳಿಯ ಹಲವು ಚಿನ್ನದ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದು, ಈ ಮೂಲಕ ಚಿನ್ನದ ಮಳಿಗೆಗಳ ಮಾಲಕರಿಗೆ ಐಟಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದಾರೆ.
ಕರಾವಳಿ ಭಾಗದ ಉಡುಪಿ, ಕಾರ್ಕಳ, ಕುಂದಾಪುರ, ಪಡುಬಿದ್ರಿ ಬ್ರಹ್ಮಾವರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬೆಳ್ತಂಗಡಿ ಮತ್ತು ಪುತ್ತೂರು ಸೇರಿದಂತೆ ಹಲವಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಉಡುಪಿ ನಗರದಲ್ಲಿರುವ ಪ್ರಮುಖ ಮಳಿಗೆ, ಅಲ್ಲೇ ಸಮೀಪ ಇರುವ ಆಭರಣ ತಯಾರಿಕಾ ಘಟಕ, ಬ್ರಹ್ಮಾವರ, ಮಂಗಳೂರಿನ ಕದ್ರಿ ಬಳಿಯ ಶಿವಭಾಗ್ ನಲ್ಲಿರುವ ಮಳಿಗೆಗಳಿಗೆ ಏಕಕಾಲದಲ್ಲಿ ದಾಳಿ ನಡೆದಿರುವುದು ತಿಳಿದುಬಂದಿದೆ. ಅದೇ ರೀತಿ ಉಡುಪಿ ನಗರದಲ್ಲಿರುವ ಆಭರಣ ತಯಾರಿಕಾ ಘಟಕದಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ.
ಎಲ್ಲ ಮಳಿಗೆಗಳಿಗೆ ಬೀಗ ಹಾಕಿ ಒಳಗಡೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವುದು ತಿಳಿದುಬಂದಿದೆ. ದಾಳಿಯ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಕೂಡ ಒದಗಿಸಲಾಗಿದೆ.
ಐದಾರು ಜನ ಐಟಿ ಅಧಿಕಾರಿಗಳ ತಂಡದಿಂದ ಜ್ಯುವೆಲ್ಲರಿಯಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಬಿಲ್ಲಿಂಗ್ ವಿವರ, ಚಿನ್ನದ ಬೇರೆ ಬೇರೆ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರಿಗೆ ಎರಡು ಟೂರಿಸ್ಟ್ ಇನೋವಾ ಕಾರಿನಲ್ಲಿ ಆಗಮಿಸಿರುವ ಅಧಿಕಾರಿಗಳು, ಶಿವಭಾಗ್ ನ ಆಭರಣ ಮಳಿಗೆಗಳ ಮೇಲೆ ದಾಳಿ ಮಾಡಿದ್ದಾರೆ. ಕರಾವಳಿಯ ಅನೇಕ ಭಾಗಗಳಲ್ಲಿ ತನ್ನ ಶೋರೂಮ್ ಹೊಂದಿರುವ ಶಿವಭಾಗ್ ಚಿನ್ನದ ಮಳಿಗಳ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮಂಗಳೂರಿನ ಕದ್ರಿ ಬಳಿಯ ಶಿವಭಾಗ್ ನ ಆಭರಣ ಜ್ಯುವೆಲ್ಲರಿ ಅಂಗಡಿಯಲ್ಲಿ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಸುಭಾಷ್ ಕಾಮತ್ ಹಾಗೂ ಮಹೇಶ್ ಕಾಮತ್ ಮಾಲೀಕತ್ವದ ಶಿವಭಾಗ್ ಆಭರಣ ಅಂಗಡಿ ಮೇಲೆ ದಾಳಿ ನಡೆದಿದೆ.
ರಾಜ್ಯದಲ್ಲಿ ಒಟ್ಟು 14 ಮಳಿಗೆಗಳು ಹಾಗೂ ಗೋವಾದಲ್ಲಿ ಒಂದು ಮಳಿಗೆ ಇದೆ. 1935 ರಲ್ಲಿ ಉಡುಪಿಯಲ್ಲಿ ಮೊದಲ ಶಿವಭಾಗ್ ಆಭರಣ ಅಂಗಡಿ ಪ್ರಾರಂಭವಾಗಿತ್ತು. ಇದೀಗ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಶಿವಭಾಗ್ ಆಭರಣ ಮಳಿಗೆಗಳು ತಲೆ ಎತ್ತಿವೆ.
ಇನ್ನು ಇದೇ ತಿಂಗಳೂ ಬೆಂಗಳೂರಿನ ಹಲವು ಜ್ಯುವೆಲ್ಲರಿ ಅಂಗಡಿಗಳ ಮೇಲೆ ಐಟಿ ದಾಳಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.