
ಪೋಲಿಸ್ ಕಸ್ಟಡಿಯಲ್ಲಿ ಊಟನೇ ಮಾಡ್ತಿಲ್ಲ ಚೈತ್ರಾ – ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು, ಸ್ಟೇಟ್ ಮೆಂಟ್ ನೀಡಲೂ ಒಪ್ಪದ ಚೈತ್ರಾ..!!
- ಕರ್ನಾಟಕ
- September 15, 2023
- No Comment
- 105
ನ್ಯೂಸ್ ಆ್ಯರೋ : ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿತಳಾಗಿರುವ ಚೈತ್ರಾ ಕುಂದಾಪುರ ಇಂದು ಸಿಸಿಬಿ ಕಚೇರಿಯಲ್ಲಿ ಕುಸಿದು ಬಿದ್ದು ವಿಕ್ಟೋರಿಯಾ ಆಸ್ಪತ್ರೆ ಪಾಲಾಗಿದ್ದಾರೆ. ಆರಂಭದಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ, ಪ್ರಸ್ತುತ ಚೈತ್ರಾ ಅವರನ್ನು ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
ಆರಂಭದಲ್ಲಿ ತಲೆ ಸುತ್ತು ಬಂದು ಚೈತ್ರಾ ಕುಸಿದು ಬಿದ್ದಿದ್ದರು ಎಂದು ಹೇಳಲಾಗಿತ್ತು. ಆದರೆ, ಅವರ ಬಾಯಲ್ಲಿ ನೊರೆ ಬಂದಿದ್ದರಿಂದ ಜನರಿಗೆ ಅನೇಕ ರೀತಿಯ ಅನುಮಾನಗಳು ಮೂಡಿತ್ತು. ಈ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ಒತ್ತಡ ಹೆಚ್ಚಾಗಿ ಚೈತ್ರಾ ಕುಸಿದು ಬಿದ್ದಿದ್ದಾರೆ. ಈ ಹಿಂದೆಯೂ ಅವರಿಗೆ ಈ ರೀತಿ ಆಗಿದೆ. ಒಂದು ಬಾರಿ ಭಾಷಣ ಮಾಡುವಾಗ ವೇದಿಕೆ ಮೇಲೇನೆ ಕುಸಿದು ಬಿದ್ದಿದ್ದರು ಎಂದು ಮನೆಯವರು ಮಾಹಿತಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನೊಂದು ಮೂಲದ ಪ್ರಕಾರ ತನ್ನ ದುಪ್ಪಟ್ಟಾವನ್ನು ಕುತ್ತಿಗೆಗೆ ಸುತ್ತಿಕೊಂಡು ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.
ಪ್ರಸ್ತುತ ಅವರ ಬಿಪಿ, ಪಲ್ಸ್ ರೇಟ್ ನಾರ್ಮಲ್ ಇದೆ. ಚೈತ್ರಾ ಅವರಿಗೆ ಮೂರ್ಛೆ ರೋಗ ಕೂಡ ಇತ್ತು. ಆಸ್ಪತ್ರೆಗೆ ಬರುವಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದು, ಸದ್ಯ ಎಲ್ಲಾ ಸರ್ಜನ್ ಗಳು ಪರೀಕ್ಷೆ ಮಾಡ್ತಿದ್ದಾರೆ ಎಂದು ಚೈತ್ರಾ ಅವರನ್ನು ಪರೀಕ್ಷಿಸಿದ ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಊಟನೇ ಮಾಡ್ತಿಲ್ಲ ಚೈತ್ರಾ..!!
ಪೊಲೀಸ್ ಕಸ್ಟಡಿಯಲ್ಲಿ ಚೈತ್ರಾ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ನಿನ್ನೆ ರಾತ್ರಿ ಅವರು ಊಟ ಮಾಡಿಲ್ಲ. ಇಂದು ಬೆಳಿಗ್ಗೆಯೂ ತಿಂಡಿ ತಿಂದಿಲ್ಲ. ಹಾಗಾಗಿ, ಸುಸ್ತಾಗಿ ಕುಸಿದು ಬಿದ್ದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಸ್ಟೇಟ್ ಮೆಂಟ್ ಕೊಡಲೊಪ್ಪದ ಚೈತ್ರಾ..!!
ಚೈತ್ರಾ ಕುಂದಾಪುರ ಅವರನ್ನು 10 ದಿನಗಳ ಕಾಲ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ಆದರೆ, ಅವರಿಂದ ಯಾವುದೇ ಹೇಳಿಕೆ ದಾಖಲಿಸಿಕೊಳ್ಳಲು ಇದುವರೆಗೆ ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಯಾವುದೇ ಪ್ರಶ್ನೆ ಕೇಳಿದರೂ ಸ್ವಾಮೀಜಿಯನ್ನು ಕೇಳಿ ಎಲ್ಲಾ ಗೊತ್ತಾಗುತ್ತದೆ ಎಂದು ಚೈತ್ರಾ ಉತ್ತರಿಸುತ್ತಿದ್ದಾರಂತೆ. ಹಾಗಾಗಿ, ಆದಷ್ಟು ಬೇಗ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ. ಆದರೆ ಅತ್ತ ಹಾಲಶ್ರೀ ಸ್ವಾಮಿ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನಾಳೆ ವಿಚಾರಣೆ ನಡೆಯಲಿದೆ.