
ನಿಫಾ ಸೋಂಕು ಹರಡದಂತೆ ಸರ್ಕಾರದ ಮುನ್ನೆಚ್ಚರಿಕೆ – ಮಸೀದಿಯ ಶುಕ್ರವಾರದ ಪ್ರಾರ್ಥನೆಗೆ ಬ್ರೇಕ್..!!
- ರಾಷ್ಟ್ರೀಯ ಸುದ್ದಿ
- September 15, 2023
- No Comment
- 58
ನ್ಯೂಸ್ ಆ್ಯರೋ : ನಿಫಾ ವೈರಸ್ ನ ಆರು ಪ್ರಕರಣಗಳು ಕೇರಳದಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಕೇರಳ ಸರ್ಕಾರ ನಿಯಂತ್ರಣ ಕ್ರಮಗಳನ್ನು ಹೆಚ್ಚಿಸಿದೆ.
ವೈರಸ್ ವಿರುದ್ಧ ಹೋರಾಡಲು ರಾಜ್ಯದ ವಿನಂತಿಯ ಮೇರೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಔಷಧಗಳನ್ನು ಕಳುಹಿಸಲಿಕೊಟ್ಟಿದ್ದು, ವೈದ್ಯಕೀಯ ಪರೀಕ್ಷೆಗಳನ್ನು ಹೆಚ್ಚಿಸಲು ಮೊಬೈಲ್ ಪ್ರಯೋಗಾಲಯವನ್ನು ಸಕ್ರಿಯಗೊಳಿಸಲಾಗಿದೆ.
ಈಗಾಗಲೇ ಪರೀಕ್ಷೆಗೆ ಕಳುಹಿಸಲಾದ 11 ಮಾದರಿಗಳು ನೆಗೆಟಿವ್ ಫಲಿತಾಂಶ ನೀಡಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ಆರ್‌ಎಂಎಲ್ ಆಸ್ಪತ್ರೆ ಮತ್ತು ನಿಮ್ಹಾನ್ಸ್‌ನ ತಜ್ಞರನ್ನೊಳಗೊಂಡ ಐದು ಸದಸ್ಯರ ಕೇಂದ್ರ ತಂಡವು ಕೇರಳದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ನಿಫಾ ಸೋಂಕಿನ ನಿರ್ವಹಣೆಗಾಗಿ ಕೇರಳದಲ್ಲೇ ಬೀಡುಬಿಟ್ಟಿದೆ.
ಪುಣೆಯಲ್ಲಿರುವ ಐಸಿಎಂಆರ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ತನ್ನ ಮೊಬೈಲ್ ಬಿಎಸ್‌ಎಲ್ -3 (ಬಯೋಸೇಫ್ಟಿ ಲೆವೆಲ್ -3) ಪ್ರಯೋಗಾಲಯವನ್ನು ಕೋಝಿಕ್ಕೋಡ್‌ಗೆ ಕಳುಹಿಸಿದೆ. ಐಸಿಎಂಆರ್ ನ ಎಂಬಿಎಸ್ ಎಲ್ -3, ದಕ್ಷಿಣ ಏಷ್ಯಾದ ಮೊದಲ ಜೈವಿಕ ಸುರಕ್ಷತೆ ಲೆವೆಲ್- 3 ಕಂಟೈನ್‌ಮೆಂಟ್ ಮೊಬೈಲ್ ಪ್ರಯೋಗಾಲಯ ಜಿಲ್ಲಾ ಮಟ್ಟದಲ್ಲಿಯೇ ಸೋಂಕನ್ನು ಆರಂಭಿಕ ಪರೀಕ್ಷೆ ಮತ್ತು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ಕೋಝಿಕ್ಕೋಡ್‌ನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನ ಸೇರದಂತೆ ಆದೇಶ ಹೊರಡಿಸಲಾಗಿದೆ.
ನಿಫಾ ವೈರಸ್ ಹರಡದಂತೆ ತಡೆಗಟ್ಟಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಮಸೀದಿಯಲ್ಲಿ ಜನರನ್ನು ಸೇರಿಸದಂತೆ ಸೂಚಿಸಿದ್ದಾರೆ. ಹೀಗಾಗಿ ಮುಂದಿನ ಆದೇಶ ಬರುವವರೆಗೆ ಮಸೀದಿಯನ್ನು ಮುಚ್ಚಲು ನಿರ್ಧರಿಸಿದ್ದೇವೆ. ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುವುದಿಲ್ಲ ಎಂದು ಕುಟ್ಟಿಯಾಡಿ ಜುಮಾ ಮಸೀದಿ ಮಹಲ್ ಸಮಿತಿಯ ಕಾರ್ಯದರ್ಶಿ ಜುಬೇರ್ ಪಿ. ತಿಳಿಸಿದ್ದಾರೆ.
ನಿಫಾ ಸೋಂಕಿತರ ಸಂಪರ್ಕ ವಲಯದಲ್ಲಿ 950 ಮಂದಿ ಇದ್ದು, ಅದರಲ್ಲಿ 213 ಮಂದಿ ಹೆಚ್ಚು ಅಪಾಯದ ವರ್ಗದಲ್ಲಿದ್ದಾರೆ. 287 ಆರೋಗ್ಯ ಕಾರ್ಯಕರ್ತರು ಸಂಪರ್ಕ ಪಟ್ಟಿಯಲ್ಲಿದ್ದಾರೆ.
ಹೆಚ್ಚಿನ ಅಪಾಯದ ವರ್ಗದಲ್ಲಿರುವ ನಾಲ್ಕು ಮಂದಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ಇದ್ದು, 17 ಮಂದಿಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ನಿಗಾದಲ್ಲಿ ಇರಿಸಲಾಗಿದೆ.