
14 ಸುದ್ದಿ ನಿರೂಪಕ ಕಾರ್ಯಕ್ರಮ ಬಹಿಷ್ಕರಿಸಿದ ವಿಪಕ್ಷ ಒಕ್ಕೂಟ I.N.D.I.A – ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಗೊತ್ತಾ?
- ರಾಜಕೀಯ
- September 15, 2023
- No Comment
- 64
ನ್ಯೂಸ್ ಆ್ಯರೋ : ಲೋಕಸಭೆ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇತ್ತ ಬಿಜೆಪಿ ನೇತೃತ್ವದ ಎನ್.ಡಿ.ಎ. ದಾಖಲೆಯ 3ನೇ ಬಾರಿಗೆ ಅಧಿಕಾರ ಹಿಡಿಯಲು ಕಸರತ್ತು ನಡೆಸಿದರೆ ವಿಪಕ್ಷಗಳ ಒಕ್ಕೂಟ ಐ.ಎನ್.ಡಿ.ಐ.ಎ. ಇದಕ್ಕೆ ಅಡ್ಡಗಾಲು ಹಾಕಲು ಪಣತೊಟ್ಟಿದೆ. ಈ ಮಧ್ಯೆ ಐ.ಎನ್.ಡಿ.ಐ.ಎ. 14 ರಾಷ್ಟ್ರೀಯ ಸುದ್ದಿ ನಿರೂಪಕರ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದೆ.
ಪಟ್ಟಿ ಬಿಡುಗಡೆ
ಯಾವ ಯಾವ ಸುದ್ದಿ ನಿರೂಪಕರ ಕಾರ್ಯಕ್ರಮಗಳನ್ನು ಬಹಿಷ್ಕರಿಸಲಾಗಿದೆ ಎನ್ನುವ ಪಟ್ಟಿಯನ್ನು ಒಕ್ಕೂಟ ಗುರುವಾರ ಬಿಡುಗಡೆ ಮಾಡಿದೆ. ಅರ್ನಬ್ ಗೋಸ್ವಾಮಿ ಸೇರಿದಂತೆ ಹಿಂದಿ ಮತ್ತು ಇಂಗ್ಲಿಷ್ ಸುದ್ದಿವಾಹಿನಿಗಳ 14 ನಿರೂಪಕರು ಈ ಪಟ್ಟಿಯಲ್ಲಿದ್ದಾರೆ. ಪ್ರಾದೇಶಿಕ ಸುದ್ದಿ ವಾಹಿನಿಯ ನಿರೂಪಕರ ಹೆಸರಿಲ್ಲ ಎನ್ನುವುದು ವಿಶೇಷ.
ಯಾರೆಲ್ಲ ಈ 14 ನಿರೂಪಕರು?
- ಅರ್ನಬ್ ಗೋಸ್ವಾಮಿ
- ಅದಿತಿ ತ್ಯಾಗಿ
- ಅಮೀಶ್ ದೇವಗನ್
- ಆನಂದ್ ನರಸಿಂಹನ್
- ಅಶೋಕ್ ಶ್ರೀವಾಸ್ತವ
- ಚಿತ್ರಾ ತ್ರಿಪಾಠಿ
- ಗೌರವ್ ಸಾವಂತ್
- ನವಿಕಾ ಕುಮಾರ್
- ಪ್ರಾಚಿ ಪರಾಸರ್
- ರುಬಿಕಾ ಲಿಯಾಖತ್
- ಶಿವ್ ಅರೂರ್
- ಸುಧೀರ್ ಚೌಧರಿ
- ಸುಶಾಂತ್ ಸಿನ್ಹಾ
ಕಾರಣವೇನು?
ಇವರೆಲ್ಲ ಬಿಜೆಪಿ ಪರ ಗುರುತಿಸಿಕೊಂಡಿದ್ದಾರೆ. ಜೊತೆಗೆ ಪ್ರಚೋದನಾತ್ಮಕ ಮತ್ತು ಕೋಮು ಭಾವನೆ ಕೆರಳಿಸುವಂತೆ ಚರ್ಚೆ ನಡೆಸುತ್ತಾರೆ ಎಂದು ಐ.ಎನ್.ಡಿ.ಐ.ಎ. ಆರೋಪಿಸಿ ಅವರ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದೆ. 2019ರ ಚುನಾವಣೆ ಸಂದರ್ಭದಲ್ಲಿಯೂ ಕಾಂಗ್ರೆಸ್ ತನ್ನ ವಕ್ತಾರರನ್ನು ಸುದ್ದಿ ವಾಹಿನಿಗಳ ಚರ್ಚೆಗೆ ಕಳುಹಿಸುವುದಿಲ್ಲ ಎಂದು ಹೇಳಿತ್ತು. ಬಿಜೆಪಿ ಈ ನಡೆಯನ್ನು ಖಂಡಿಸಿ ತುರ್ತು ಪರಿಸ್ಥಿತಿಗೆ ಹೋಲಿಸಿದೆ.
ಕಾಂಗ್ರೆಸ್ ಸಮರ್ಥನೆ
ಈ ನಿರ್ಧಾರವನ್ನು ಸಮರ್ಥಿಸಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಸುದ್ದಿ ನಿರೂಪಕರ ಪಟ್ಟಿ ತಯಾರಿಸಿದ್ದೇವೆ. ದ್ವೇಷ ತುಂಬಿದ ನಿರೂಪಣೆಯನ್ನು ಕಾನೂನುಬದ್ಧಗೊಳಿಸಲು ನಾವು ತಯಾರಿಲ್ಲ. ಹೀಗಾಗಿ ಅವರ ಕಾರ್ಯಕ್ರಮಗಳಿಗೆ ತೆರಳುವುದಿಲ್ಲ ಎಂದಿದ್ದಾರೆ.
ಬಿಜೆಪಿ ಹೇಳಿದ್ದೇನು?
ಕಾಂಗ್ರೆಸ್ ನ ಇಂದಿರಾ ಗಾಂಧಿ ನ್ಯಾಯಾಂಗ, ಅಧಿಕಾರಶಾಹಿ ಮತ್ತು ಭಯಾನಕ ತುರ್ತು ಪರಿಸ್ಥಿತಿಯನ್ನು ಹೇರಲು ಕರೆ ನೀಡಿದರು. ರಾಜೀವ್ ಗಾಂಧಿ ಮಾಧ್ಯಮವನ್ನು ರಾಜ್ಯದ ನಿಯಂತ್ರಣಕ್ಕೆ ತರಲು ಯತ್ನಿಸಿ ವಿಫಲರಾದರು. ಇನ್ನು ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳನ್ನು ನಿಷೇಧಿಸಿತ್ತು ಎಂದು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.