ದರ್ಶನದ ಟೋಕನ್ ವಿತರಣೆ ವೇಳೆ ದುರಂತ; ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾಣಬಿಟ್ಟ 7 ಭಕ್ತರು
ತಿರುಪತಿಗೆ ಲಕ್ಷಾಂತರ ಭಕ್ತರ ಆಗಮನದಿಂದ ತಿರುಮಲದಲ್ಲಿ ನಿತ್ಯಜಾತ್ರೆಯ ಸಂಭ್ರಮ ತುಂಬಿತ್ತು. ಶುಕ್ರವಾರ ವೈಕುಂಠ ಏಕಾದಶಿ. ಹೀಗಾಗಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಭಕ್ತರಲ್ಲಿ ಕಾಲ್ತುಳಿತ ಸಂಭವಿಸಿದೆ.
ನಿನ್ನೆ ಭಜ ಗೋವಿಂದನ ಸ್ಮರಣೆಗೆ ದೇಶದ ದಶದಿಕ್ಕಿನಿಂದಲೂ ಲಕ್ಷಾಂತರ ಭಕ್ತರ ದಂಡೇ ಹರಿದು ಬಂದಿತ್ತು. ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನದ ಟಿಕೆಟ್ ಪಡೆಯುವ ವೇಳೆ ಹೆಚ್ಚಾದ ಭಕ್ತಸಾಗರದಿಂದ ಕಾಲ್ತುಳಿತ ಉಂಟಾಗಿ 7 ಭಕ್ತರು ಜೀವ ಕಳೆದುಕೊಂಡಿದ್ದಾರೆ. ಜನವರಿ 10. ಅಂದ್ರೆ ನಾಳೆ ವೈಕುಂಠ ಏಕಾದಶಿ ನಡೆಯಲಿದೆ. ಈ ವೇಳೆ ವಿಶ್ವ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ತೆರೆಯಲಿದೆ.
ಈ ಕಾರಣಕ್ಕೆ ತಿಮ್ಮಪ್ಪನ ಆಲಯದಲ್ಲಿ ಸಡಗರ ಮನೆ ಮಾಡಿತ್ತು ಆದ್ರೆ ಏಕಾದಶಿಗೂ ಮುನ್ನವೇ ತಿರುಪತಿಯಲ್ಲಿ ಘೋರ ದುರಂತವೊಂದು ಸಂಭವಿಸಿ ಹೋಗಿದೆ. ವೈಕುಂಠ ದ್ವಾರದ ದರ್ಶನ ಟಿಕೆಟ್ ಪಡೆಯಲು ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಕೌಂಟರ್ ಬಳಿ ಕಾಲ್ತುಳಿತ ಸಂಭವಿಸಿದೆ.
ವೈಕುಂಠ ದ್ವಾರದ ದರ್ಶನ ಟಿಕೆಟ್ ಪಡೆಯಲು ಬೆಳಗ್ಗೆಯಿಂದಲೇ ತಿರುಪತಿಯ ವಿವಿಧ ಟಿಕೆಟ್ ಕೇಂದ್ರಗಳಲ್ಲಿ ಸಾವಿರಾರು ಭಕ್ತರು ಸಾಲುಗಟ್ಟಿದ್ದರು. ಈ ವೇಳೆ, ಪದ್ಮಾವತಿಪುರಂ ಟೋಕನ್ ವಿತರಣಾ ಕೇಂದ್ರದ ಬಳಿ ನೂಕುನುಗ್ಗಲು ಉಂಟಾಗಿದೆ. ಭಕ್ತರಿಗೆ ಸರತಿ ಸಾಲಿನಲ್ಲಿ ಪ್ರವೇಶಿಸಲು ಅವಕಾಶ ನೀಡುತ್ತಿದ್ದಂತೆ 5 ಸಾವಿರಕ್ಕೂ ಹೆಚ್ಚು ಭಕ್ತರು ಏಕಾಏಕಿ ಪ್ರವಾಹದಂತೆ ನುಗ್ಗಿ ಬಂದಿದ್ದಾರೆ.
ಹಿಂದಿನಿಂದ ರಭಸದ ಒತ್ತಡ ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ತಮಿಳುನಾಡಿನ ಸೇಲಂ ಮಲ್ಲಿಕಾ ಎಂಬ ಮಹಿಳೆ ಸೇರಿ ಮೂವರು ಮಹಿಳೆಯರು, ಇನ್ನುಳಿದ ನಾಲ್ವರು ಪುರುಷ ಭಕ್ತರು ಜೀವ ಬಿಟ್ಟಿದ್ದಾರೆ. 40ಕ್ಕೂ ಹೆಚ್ಚು ಮಂದಿ ಭಕ್ತರಿಗೆ ಗಾಯಗಳಾಗಿದ್ದು, ಇಬ್ಬರು ಸ್ಥಿತಿ ಗಂಭೀರ ಅಂತ ಗೊತ್ತಾಗಿದೆ. ಸದ್ಯ ಗಾಯಾಳುಗಳನ್ನು ರುಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ತಿಳಿದು ಬಂದಿದೆ.
Leave a Comment