ಇಂದು ರಾಷ್ಟ್ರೀಯ ಸಂವಿಧಾನ ದಿನ; ಅಮೃತಮಹೋತ್ಸವ ಸಂಭ್ರಮದಲ್ಲಿ ನಮ್ಮ ‘ಸಂವಿಧಾನ’
ನ್ಯೂಸ್ ಆ್ಯರೋ: ಸಂವಿಧಾನ ರಚನಾ ಸಭೆಯು 1949ರ ನವೆಂಬರ್ 26ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತೀ ವರ್ಷ ನ.26ನ್ನು ‘ರಾಷ್ಟ್ರೀಯ ಸಂವಿಧಾನ ದಿನ’ ಎಂದು ಆಚರಿಸಲಾಗುತ್ತದೆ. ಜನವರಿ 26, 1950ರಂದು ಜಾರಿಗೆ ಬಂದ ಸಂವಿಧಾನ, ಭಾರತದ ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಸಮಾನತೆಯ ಚೌಕಟ್ಟನ್ನು ವ್ಯಾಖ್ಯಾನಿಸುವ ಮೂಲಭೂತ ದಾಖಲೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಹೇಳಿದೆ.
ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳು ಪೂರ್ಣಗೊಂಡಿದ್ದು, ಈ ವರ್ಷ ಸಂವಿಧಾನದ ಅಮೃತಮಹೋತ್ಸವವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ವರ್ಷವಿಡೀ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿವೆ.
ಸಂವಿಧಾನ ದಿನ: ಇತಿಹಾಸ 2015 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ನವೆಂಬರ್ 19 ರಂದು ಗೆಜೆಟ್ ಅಧಿಸೂಚನೆಯ ಮೂಲಕ ನವೆಂಬರ್ 26 ಅನ್ನು ಸಂವಿಧಾನ ದಿನವೆಂದು ಘೋಷಿಸಿತು. ನಮಗೆ ತಿಳಿದಿರುವಂತೆ 15 ಆಗಸ್ಟ್ 1947 ರಂದು ಭಾರತ ಸ್ವತಂತ್ರವಾಯಿತು. 26 ಜನವರಿ 1950 ರಂದು ನಾವು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ ಏಕೆಂದರೆ ಈ ದಿನದಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಈ ಆಚರಣೆಯು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುವ ಪ್ರಜಾಸತ್ತಾತ್ಮಕ ತತ್ವಗಳ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಸಂವಿಧಾನದ ಮಹತ್ವ:
ಸಾಂವಿಧಾನಿಕ ವಿಚಾರಗಳ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸುವುದು, ಸಂವಿಧಾನ ಉತ್ತೇಜಿಸುವ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರ ಮೂಲ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವುದು.
ಭಾರತದ ಸಂವಿಧಾನದ ಪೀಠಿಕೆ ಯಾವುದು?;
ಭಾರತದ ನಾಗರಿಕರಾದ ನಾವು, ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ, ಸಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯವನ್ನು ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಗಳನ್ನು ದೊರಕಿಸಿ, ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭಾತೃತ್ವತೆಯನ್ನು ಪ್ರೋತ್ಸಾಹಿಸಲು ನಿರ್ಧರಿಸಿ: ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ 1946 ನವೆಂಬರ್ ಮಾಹೆಯ 26ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗೆ ವಿಧಿಸಿಕೊಳ್ಳುತ್ತೇವೆ.
ಸಂವಿಧಾನದ ಅಮೃತಮಹೋತ್ಸವದ ಪ್ರಯುಕ್ತ MY ಭಾರತ್ ಸ್ವಯಂಸೇವಕರು, NSS, NCC, ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಸಂಸ್ಥೆಗಳ 10,000ಕ್ಕೂ ಹೆಚ್ಚು ಯುವಕರು ಭಾಗವಹಿಸುವ ನಿರೀಕ್ಷೆಯಿರುವ ಪಾದಯಾತ್ರೆಯನ್ನು ಆಯೋಜಿಸಲಾಗಿದೆ. ಸಾಂಸ್ಕೃತಿಕ ಪ್ರದರ್ಶನಗಳು, ಶೈಕ್ಷಣಿಕ ಪ್ರದರ್ಶನಗಳು ಮತ್ತು ಸಂವಾದಾತ್ಮಕ ಕಾರ್ಯಾಗಾರಗಳು ಯುವ ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳ ತಿಳುವಳಿಕೆಯನ್ನು ಇನ್ನೂ ಗಾಢವಾಗಿಸುತ್ತವೆ. ವಿಕಸಿತ ಭಾರತ- 2047ರ ದೃಷ್ಟಿಕೋನದಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಯುವಕರ ಪಾತ್ರವನ್ನು ಒತ್ತಿಹೇಳುವ ಮೂಲಕ ವರ್ಷವಿಡೀ ಸಂವಿಧಾನ ಅಮೃತಮಹೋತ್ಸವ ಆಚರಣೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಮಹತ್ವದ ಮೈಲಿಗಲ್ಲು ಸಾಧಿಸಲಿವೆ.
Leave a Comment