
ಚೊಚ್ಚಲ ಚೆಸ್ ವಿಶ್ವ ಕಪ್ ಗೆಲ್ಲುವ ಭಾರತದ ಪ್ರಜ್ಞಾನಂದ ಕನಸು ಭಗ್ನ – ಕಾರ್ಲ್ ಸೆನ್ ವಿರುದ್ಧ ವೀರೋಚಿತ ಸೋಲು
- ಕ್ರೀಡಾ ಸುದ್ದಿ
- August 24, 2023
- No Comment
- 75
ನ್ಯೂಸ್ ಆ್ಯರೋ : ಅಝರ್ ಬೈಜಾನ್ ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ ನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ವೀರೋಚಿತ ಸೋಲು ಕಂಡಿದ್ದಾರೆ. ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್ ಸೆನ್ ಜಯ ಸಾಧಿಸಿದ್ದಾರೆ. ಈ ಮೂಲಕ ಚೊಚ್ಚಲ ವಿಶ್ವ ಕಪ್ ಜಯಿಸುವ, 18ರ ಹರೆಯದ ಪ್ರಜ್ಞಾನಂದ ಕನಸು ಭಗ್ನವಾಗಿದೆ.
ನಿರ್ಣಾಯಕ ಟೈ ಬ್ರೇಕ್
ಗುರುವಾರ ನಡೆದ ಟೈ ಬ್ರೇಕರ್ ನಲ್ಲಿ ಇಬ್ಬರೂ ತಲಾ 10 ನಿಮಿಷಗಳ 2 ರ್ಯಾಪಿಡ್ ಗೇಮ್ ಗಳನ್ನು ಆಡಿದರು. ಎರಡರಲ್ಲೂ ಪ್ರಜ್ಞಾನಂದ ನಿರೀಕ್ಷೆ ಹುಟ್ಟುಹಾಕಿದ್ದರೂ ಕೊನೆಗೆ ನಾರ್ವೆಯ ಆಟಗಾರನಿಗೆ ಶರಣಾಗಬೇಕಾಯಿತು.
ಟೈ ಬ್ರೇಕ್ ನ ಮೊದಲ ಸುತ್ತಿನ ಮೊದಲ ಗೇಮ್ ನ 16 ಚಲನೆಗಳ ನಂತರ ಕಾರ್ಲ್ ಸೆನ್ ಬಿಷಪ್ ಗಾಗಿ ಪ್ರಜ್ಞಾನಂದ ತನ್ನ ನೈಟ್ ತ್ಯಾಗ ಮಾಡಿದರು. ಇದರ ಬೆನ್ನಲ್ಲೇ ಇಬ್ಬರು ತಮ್ಮ ರಾಣಿಯನ್ನು ಕಳೆದುಕೊಂಡರು. 21ನೇ ನಡೆಯ ವೇಳೆ ಕಾರ್ಲ್ ಸೆನ್ ಹಿಡಿತ ಸಾಧಿಸಿದ್ದರು.
25ನೇ ನಡೆಯ ಬಳಿಕ ಪ್ರಜ್ಞಾನಂದ ಸಮಬಲ ಸಾಧಿಸಿದರು. 47ನೇ ಚಲನೆ ಬಳಿಕ ಕಾರ್ಲ್ ಸೆನ್ ಗೆದ್ದುಕೊಂಡು 1-0 ಮುನ್ನಡೆ ಸಾಧಿಸಿದರು. 2ನೇ ಟೈ ಬ್ರೇಕ್ ನ 2ನೇ ಗೇಮ್ ಆರಂಭಿಸಿದ್ದ ಪ್ರಜ್ಞಾನಂದ ಮೊದಲಿನಿಂದಲೇ ಹಿನ್ನಡೆ ಅನುಭವಿಸಿದ್ದರು. ಅಲ್ಲದೆ ಪ್ರತಿ ಚಲನೆಗೂ ಹೆಚ್ಚಿನ ಸಮಯ ತೆಗೆದುಕೊಂಡರು. ಸಂಪೂರ್ಣ ಹಿಡಿತ ಸಾಧಿಸಿದ ಕಾರ್ಲ್ ಸೆನ್ ಡ್ರಾ ಮಾಡಿಕೊಂಡು 1-0 ಅಂತರದಿಂದ ಗೆದ್ದು ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದರು.