
ಪುತ್ತೂರು : ನಡುರಸ್ತೆಯಲ್ಲೇ ಯುವತಿಯ ಕತ್ತು ಸೀಳಿದ ಪ್ರಕರಣ – ಗಾಯಗೊಂಡ ಯುವತಿ ಸಾವು, ಆರೋಪಿ ಪೋಲಿಸರ ವಶಕ್ಕೆ : ಕೊಲೆಗೆ ಕಾರಣ ತಿಳಿಸಿದ ದ.ಕ. ಎಸ್ಪಿ
- ಕರಾವಳಿ
- August 24, 2023
- No Comment
- 480
ನ್ಯೂಸ್ ಆ್ಯರೋ : ಪುತ್ತೂರಿನ ಬಸ್ ಸ್ಟಾಂಡ್ ನಲ್ಲಿ ಯುವತಿಯ ಜೊತೆ ಜಗಳವಾದ ಬಳಿಕ ಆಕೆಯ ಬೆನ್ನತ್ತಿ ಬಂದ ಯುವಕನೊಬ್ಬ ಪೋಲಿಸ್ ಠಾಣೆಯ ಸಮೀಪವೇ ಯುವತಿಯ ಕತ್ತು ಸೀಳಿ ಪರಾರಿಯಾದ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ಯುವತಿ ಮೃತಪಟ್ಟಿದ್ದಾಳೆ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೃತ ಯುವತಿಯನ್ನು ಕುದ್ದು ಪದವಿನ ವಿಜಯನ್ ಎಂಬವರ ಪುತ್ರಿ, ಪುತ್ತೂರಿನ ವಸ್ತ್ರ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದ ಯುವತಿ ಗೌರಿ ಎಂದು ಗುರುತಿಸಲಾಗಿದೆ.
ಘಟನೆ ನಡೆದ ಒಂದೂವರೆ ಘಂಟೆಯೊಳಗೆ ಆರೋಪಿಯನ್ನು ಪೋಲಿಸರು ಬಂಧಿಸಿದ್ದು, ಬಂಧಿತ ಬರೆಪ್ಪಾಡಿಯ ಪದ್ಮರಾಜ್ ಎಂದು ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಮೃತ ಗೌರಿ ಹಾಗೂ ಪದ್ಮರಾಜ್ ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಹಲವು ಬಾರಿ ಗಲಾಟೆ ಕೂಡ ಮಾಡಿಕೊಂಡಿದ್ದರು. ಅಲ್ಲದೇ ಈ ಸಂಬಂಧ ಈ ಮೊದಲೇ ವಿಟ್ಲ ಠಾಣೆಯಲ್ಲೂ ದೂರು ದಾಖಲಾಗಿತ್ತು ಎಂದು ಇದೇ ವೇಳೆ ಎಸ್ಪಿ ಮಾಹಿತಿ ನೀಡಿದ್ದಾರೆ.
ಇಂದು ಮಧ್ಯಾಹ್ನ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲೇ ನಡೆದಿರುವ ಘಟನೆ ಇದಾಗಿದ್ದು, ಮೂರರಿಂದ ನಾಲ್ಕು ಬಾರಿ ಆ ಯುವಕ ಯುವತಿಯ ಕತ್ತು ಸೀಳಿದ್ದ ಎನ್ನಲಾಗಿದೆ.
ಘಟನೆಯ ಹಿನ್ನೆಲೆ..
ಇಂದು ಮಧ್ಯಾಹ್ನ ಮೊದಲಿಗೆ ಪುತ್ತೂರು ಬಸ್ ನಿಲ್ದಾಣದಲ್ಲಿ ಯುವಕ ಮತ್ತು ಯುವತಿ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಕೊನೆಗೆ ಆಕೆ ಮಹಿಳಾ ಪೊಲೀಸ್ ಠಾಣೆಯ ಬಳಿ ಬಂದಾಗ ಬೈಕ್ ನಲ್ಲಿ ಬಂದ ಯುವಕ ಆಕೆಯನ್ನು ಗೋಡೆಗೆ ಒತ್ತಿ ಹಿಡಿದು ಆಕೆಯ ಕತ್ತಿಗೆ ಚೂರಿಯಿಂದ ಇರಿದು ಬಳಿಕ ಬೈಕ್ ಅಲ್ಲೇ ಬಿಟ್ಟು ಪರಾರಿಯಾಗಿದ್ದ.

ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಶಿಫ್ಟ್ ಮಾಡಲಾಯಿತಾದರೂ ಗಂಭೀರ ಗಾಯಗೊಂಡಿದ್ದ ಯುವತಿ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.