
ಇತಿಹಾಸದ ಕ್ರೂರಿಗಳಿಗೆ ಆಗದ ಕೆಲಸ ಪರಾವಲಂಬಿ ಜೀವಿ ಅಳಿಸಿಹಾಕಬಹುದೇ? – ಉದಯನಿಧಿ ಹೇಳಿಕೆಗೆ ಯೋಗಿ ಆದಿತ್ಯನಾಥ್ ಕೌಂಟರ್ ಅಟ್ಯಾಕ್..!!
- ರಾಜಕೀಯ
- September 8, 2023
- No Comment
- 63
ನ್ಯೂಸ್ ಆ್ಯರೋ : ರಾವಣನ ಅಹಂಕಾರ, ಕಂಸನ ಘರ್ಜನೆ, ಔರಂಗಜೇಬನ ದುಷ್ಕೃತ್ಯಗಳಿಂದ ನಾಶಮಾಡಲು ಸಾಧ್ಯವಾಗದ ಸನಾತನ ಧರ್ಮವನ್ನು ಪರಾವಲಂಬಿ ಜೀವಿ ಅಳಿಸಿ ಹಾಕಲು ಸಾಧ್ಯವೇ? ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾಗೆ ಹೋಲಿಸಿ, ಸನಾತನ ಧರ್ಮವನ್ನು ಬುಡದಿಂದಲೇ ನಿರ್ಮೂಲನೆ ಮಾಡಬೇಕು ಎಂದು ಹೇಳಿರುವುದನ್ನು ವಿರೋಧಿಸಿ ಅವರು ಮಾತನಾಡಿದರು.
ಪ್ರತಿ ಯುಗದಲ್ಲೂ ಸತ್ಯವನ್ನು ಸುಳ್ಳಾಗಿಸುವ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನದಲ್ಲಿ ಅವರೆಲ್ಲರೂ ನಾಶವಾಗಿದ್ದಾರೆ. ಸನಾತನ ಧರ್ಮವೇ ಅಂತಿಮ ಸತ್ಯ ಎಂಬುದನ್ನು ನಾವು ಮರೆಯಬಾರದು. ಸನಾತನ ಧರ್ಮದತ್ತ ಬೆರಳು ತೋರುವುದು ಮಾನವೀಯತೆಯನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನವಾಗಿದೆ ಎಂದರು.
ಸನಾತನ ಧರ್ಮವು ಸೂರ್ಯನಂತೆ ಶಕ್ತಿಯ ಮೂಲವಾಗಿದೆ. ಮೂರ್ಖನೊಬ್ಬ ಮಾತ್ರ ಸೂರ್ಯನ ಮೇಲೆ ಉಗುಳುವ ಆಲೋಚನೆ ಮಾಡಬಹುದು ಎಂದ ಅವರು, ಭಾರತದ ಸಂಪ್ರದಾಯದ ಬಗ್ಗೆ ನಾವು ಹೆಮ್ಮೆ ಪಡಬೇಕು. ಈಗಿನವರ ದುಷ್ಕೃತ್ಯದಿಂದ ಮುಂದಿನ ಪೀಳಿಗೆ ಅವಮಾನದಿಂದ ಬದುಕುವಂತಾಗಬೇಕಾಗುತ್ತದೆ ಎಂದು ಹೇಳಿದರು.
ದೇವರನ್ನು ನಾಶ ಮಾಡಲು ಯತ್ನಿಸಿದವರೆಲ್ಲ ತಾವೇ ನಾಶವಾದರು. 500 ವರ್ಷಗಳ ಹಿಂದೆ ಸನಾತನ ಸಂಸ್ಥೆಗೆ ಅವಮಾನ ಮಾಡಲಾಗಿತ್ತು, ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಪ್ರತಿಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡಲು ಯತ್ನಿಸುತ್ತಿವೆ ಮತ್ತು ಭಾರತದ ಪ್ರಗತಿಗೆ ಅಡ್ಡಿಪಡಿಸಲು ಯತ್ನಿಸುತ್ತಿವೆ ಎಂದು ಹೇಳಿದರು.