
ಸೌಜನ್ಯಾ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಹಾಕಲಾಗಿದ್ದ PIL ವಿಲೇವಾರಿ – ಮರು ತನಿಖೆಗೆ ಅರ್ಜಿ ಹಾಕಲು ಇರುವ ದಾರಿ ಹೇಳಿದ ಹೈಕೋರ್ಟ್
- ನ್ಯಾಯಾಂಗ
- September 8, 2023
- No Comment
- 90
ನ್ಯೂಸ್ ಆ್ಯರೋ : ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿರುವ ಉಜಿರೆ ಎಸ್.ಡಿ.ಎಂ. ಕಾಲೇಜು ವಿದ್ಯಾರ್ಥಿನಿ ಕು.ಸೌಜನ್ಯಾ ಪ್ರಕರಣದ ಮರು ತನಿಖೆ ನಡೆಸಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿಗೊಳಿಸಿದ್ದು, ಹೋರಾಟಗಾರರಿಗೆ ಮುಂದಿನ ದಾರಿಯನ್ನು ತೋರಿಸಿಕೊಟ್ಟಿದೆ.
2012 ರಲ್ಲಿ ನಡೆದಿದ್ದ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಗಳಾದ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯಾಳನ್ನು ಅಪಹರಿಸಿ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ, ಸಿಐಡಿ ಮತ್ತು ಸಿಬಿಐಯಿಂದ ತನಿಖೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಕಾರ್ಕಳದ ಸಂತೋಷ್ ರಾವ್ ನಿರಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿತ್ತು.
ಇದಾದ ಬಳಿಕ ಸೌಜನ್ಯ ಪರ ಪ್ರತಿಭಟನೆ ಮತ್ತೊಂದು ಮಗ್ಗುಲು ಬದಲಿಸಿದ್ದು ನಿಜವಾದ ಅಪರಾಧಿಗಳನ್ನು ಬಂಧಿಸಬೇಕು, ತನಿಖೆಯ ಆರಂಭದಲ್ಲಿ ಲೋಪ ಎಸಗಿರುವ ತನಿಖಾಧಿಕಾರಿ ಮತ್ತು ವೈದ್ಯಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಗುತ್ತಿದೆ.
ಇದರ ನಡುವೆಯೇ ಸೌಜನ್ಯಾ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಗಿರೀಶ್ ಭಾರದ್ವಾಜ್, ನವೀನ್ ಕುಮಾರ್ ನೆರಿಯ ಬೆಳ್ತಂಗಡಿ ಮತ್ತು ವಿನಾಯಕ ಫ್ರೆಂಡ್ಸ್ ಟ್ರಸ್ಟ್ ಬಲ್ನಾಡು ಪುತ್ತೂರು ಇವರು ಒಟ್ಟಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೆ.8ರಂದು ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದ್ದರು.
ಕೋರ್ಟ್ ಹೇಳಿದ್ದೇನು?
ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸ್ವೀಕರಿಸಲು ಕಾನೂನು ತೊಡಕುಗಳಿವೆ. ಈ ಬಗ್ಗೆ ಸರಕಾರ ಅಥವಾ ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬ ಮಾತ್ರ ಆರೋಪಿಯನ್ನು ದೋಷಮುಕ್ತಗೊಳಿಸಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ.
ತನಿಖಾ ಲೋಪದ ಅಂಶವನ್ನು ಮೇಲ್ಮನವಿಯಲ್ಲೇ ಪರಿಗಣಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಭೆ,ಸಮಾರಂಭ, ಧರಣಿ ಹಾಗು ಭಾವನೆಗಳಿಂದ ಕಾನೂನು ಚೌಕಟ್ಟು ಮೀರಲು ಸಾಧ್ಯವಿಲ್ಲ. ಅರ್ಜಿದಾರರ ಉದ್ದೇಶ ಒಳ್ಳೆಯದೇ ಇದ್ದರೂ ಕಾನೂನಿನ ಮಿತಿ ಒಳಗಡೆ ವ್ಯವಹರಿಸಬೇಕಾಗುತ್ತದೆ ಎಂದು ಅಭಿಪ್ರಾಯ ತಿಳಿಸಿದ ವಿಭಾಗೀಯ ನ್ಯಾಯಪೀಠ ಸಂತ್ರಸ್ತ ಕುಟುಂಬಕ್ಕೆ ಮೇಲ್ಮನವಿ ಸಲ್ಲಿಸಲು ಸಹಾಯ ಮಾಡಿ ಎಂದು ಸಲಹೆ ನೀಡಿತಲ್ಲದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ ಮಾಡಿದೆ.