
ಸಚಿವ ಪ್ರಿಯಾಂಕ್ ಖರ್ಗೆಗೆ ಕಲಬುರಗಿ ಮಹಾನಗರ ಪಾಲಿಕೆಯಿಂದ ದಂಡದ ಬಿಸಿ – ಕಾರಣವೇನು ಗೊತ್ತಾ?
- ರಾಜಕೀಯ
- August 31, 2023
- No Comment
- 52
ನ್ಯೂಸ್ ಆ್ಯರೋ : ಕಾನೂನು ಎಲ್ಲರಿಗೂ ಒಂದೇ. ಎಷ್ಟೇ ಪ್ರಭಾವಿಯಾದರೂ ಕಾನೂನು ಮುಂದೆ ತಲೆ ಬಾಗಲೇ ಬೇಕು ಎನ್ನುವುದನ್ನು ಸಾಬೀತು ಪಡಿಸುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಬೆಂಬಲಿಗರು ನಿಯಮ ಮೀರಿದ ಹಿನ್ನಲೆಯಲ್ಲಿ ಕಲಬುರಗಿ ಉಸ್ತುವಾರಿ ಸಚಿವ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಯಾಂಕ್ ಖರ್ಗೆ ಅವರಿಗೆ ದಂಡ ವಿಧಿಸಲಾಗಿದೆ.
ಕಾರಣವೇನು?
ಪಾಲಿಕೆಯ ರಸ್ತೆಗಳಲ್ಲಿ ಅನುಮತಿ ಪಡೆಯದೇ ಬ್ಯಾನರ್ ಗಳನ್ನು ಅಳವಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಿಯಾಂಕ್ ಖರ್ಗೆ ಭಾವಚಿತ್ರವಿರುವ ಬ್ಯಾನರ್ ಗಳನ್ನು ನಗರದ ರಸ್ತೆಗಳಲ್ಲಿ ಅಳವಡಿಸಲು ಮಹಾನಗರ ಪಾಲಿಕೆಯ ಅನುಮತಿಯನ್ನು ಅವರ ಬೆಂಬಲಿಗರು ಪಡೆದಿರಲಿಲ್ಲ. ಹೀಗಾಗಿ ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರಗಿ ಮಹಾನಗರ ಪಾಲಿಕೆ 5,000 ರೂ. ದಂಡ ವಿಧಿಸಿದೆ.
ನಿನ್ನೆ (ಆಗಸ್ಟ್ 30) ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮೀ’ಗೆ ಚಾಲನೆ ನೀಡಿದ್ದ ಹಿನ್ನಲೆಯಲ್ಲಿ ಪ್ರಿಯಾಂಕ್ ಖರ್ಗೆ ಅವರ ಭಾವಚಿತ್ರವಿರುವ ಬ್ಯಾನರ್ ರಸ್ತೆ ಬದಿ ಅಳವಡಿಸಲಾಗಿತ್ತು.
ಪಾಲಿಕೆ ಕ್ರಮವನ್ನು ಒಪ್ಪಿಕೊಂಡಿರುವ ಸಚಿವ ದಂಡದ ಮೊತ್ತ ಪಾವತಿಸಲು ಸಮ್ಮತಿಸಿದ್ದಾರೆ. ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಿದಂತಾಗಿದೆ.