
ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹಗೊಂಡಿದ್ದು ಯಾಕೆ? – ಎಲ್ಲರಿಗೂ ಗೊತ್ತಿಲ್ಲದ ಅಸಲಿ ಸತ್ಯ ಇಲ್ಲಿದೆ..
- ರಾಜಕೀಯ
- September 2, 2023
- No Comment
- 60
ನ್ಯೂಸ್ ಆ್ಯರೋ : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದ ಜೆಡಿಎಸ್ ಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಯುವ ನಾಯಕ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿದಲಾಗಿದೆ.
ಕಾರಣವೇನು?
ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಒದಗಿಸಿದ್ದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅನರ್ಹಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ.
ಅನರ್ಹಕ್ಕೆ ಕಾರಣವಾದ ಅಂಶಗಳು
- ಪ್ರಜ್ವಲ್ ರೇವಣ್ಣ ಮೆಸರ್ಸ್ ಅಧಿಕಾರ್ ವೆಂಚರ್ಸ್ ಎಲ್.ಎಲ್.ಪಿ. ಮತ್ತು ದ್ರೋಣ ವರ್ಕ್ ಫೋರ್ಸ್ ಎಲ್.ಎಲ್.ಪಿ. ಸಂಸ್ಥೆಗಳಲ್ಲಿನ ಪಾಲುದಾರಿಕೆ ಮತ್ತು ಮಾಲಿಕತ್ವದ ವಿವರಗಳನ್ನು ಬಹಿರಂಗಪಡಿಸಿಲ್ಲ.
- ಚುನಾವಣೆಗೆ ಸ್ಪರ್ಧಿಸುವಾಗ ಅಂದಿನ ದಿನಕ್ಕೆ ಅನುಗುಣವಾಗಿ ಕಳೆದ 5 ವರ್ಷಗಳ ಆದಾಯ ತೆರಿಗೆ ಪಾವತಿಯ ಸಲ್ಲಿಸಬೇಕು. ಆದರೆ ಪ್ರಜ್ವಲ್ ರೇವಣ್ಣ 2008ರಿಂದ 2018ರ ಅವಧಿಯಲ್ಲಿ ದೊಡ್ಡ ಮೊತ್ತದ ಆದಾಯ ಮತ್ತು ಆಸ್ತಿ ಸಂಪಾದಿಸಿದ್ದರೂ 2018-19ನೇ ಸಾಲಿನ ಆದಾಯ ತೆರಿಗೆ ಮಾಹಿತಿ ಮಾತ್ರ ಒದಗಿಸಿದ್ದಾರೆ.
- ಸ್ಥಿರ ಮತ್ತು ಚರಾಸ್ತಿಗಳ ಕುರಿತು ಅಸಮರ್ಪಕ ಮಾಹಿತಿ ನೀಡಿದ್ದು, ಅನೇಕ ಅಂಶಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಪ್ರಮಾಣ ಪತ್ರದಲ್ಲಿ ಮರೆ ಮಾಚಲಾಗಿದೆ.
- ಎಚ್.ಡಿ.ರೇವಣ್ಣ ಅವರಿಂದ ದೊಡ್ಡ ಮೊತ್ತದ ಅಂದರೆ 1.26 ಕೋಟಿ ರೂ. ಸಾಲ ಪಡೆದಿರುವುದಾಗಿ ಪ್ರಜ್ವಲ್ ಹೇಳಿದ್ದಾರೆ. ಆದರೆ ರೇವಣ್ಣ ಲೋಕಾಯುಕ್ತಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಮಗನಿಗೆ 47.36 ಲಕ್ಷ ರೂ. ಸಾಲ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
- ಪ್ರಜ್ವಲ್ ರೇವಣ್ಣ ತಮ್ಮ ವ್ಯಾಪಾರದ ಆದಾಯ 7.48 ಲಕ್ಷ ರೂ. ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಆದಾಯದ ಮೂಲ ಯಾವುದು ಎಂದು ಬಹಿರಂಗಪಡಿಸಿಲ್ಲ.
- 2019ರ ಮಾರ್ಚ್ 22ಕ್ಕೆ ಅನ್ವಯವಾಗುವಂತೆ ಬ್ಯಾಂಕ್ ಬ್ಯಾಲೆನ್ಸ್ 5.78 ಲಕ್ಷ ರೂ. ಎಂದು ಪ್ರಮಾಣ ಪತ್ರದಲ್ಲಿ ತೋರಿಸಲಾಗಿತ್ತು. ಆದರೆ ವಾಸ್ತವದಲ್ಲಿ ಅದು 49.09 ಲಕ್ಷ ರೂ. ಆಗಿತ್ತು.
*ರಾಜ್ಯಸಭಾ ಸದಸ್ಯರಾಗಿದ್ದ ಕುಪೇಂದ್ರ ರೆಡ್ಡಿ ಅವರಿಂದ ಪಡೆದುಕೊಂಡಿದ್ದ 50 ಲಕ್ಷ ರೂ. ಮಾಹಿತಿಯನ್ನೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ.
ತಕರಾರು ಅರ್ಜಿ
ಲೋಕಸಭೆಗೆ 2019ರ ಎಪ್ರಿಲ್ 18ರಂದು ಚುನಾವಣೆ ನಡೆದು ಮೇ 23ರಂದು ಫಲಿತಾಂಶ ಪ್ರಕಟವಾಗಿತ್ತು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಜಯಗಳಿಸಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ.ಮಂಜು ಎರಡನೇ ಸ್ಥಾನ ಗಳಿಸಿದ್ದರು. ಕಾಂಗ್ರೆಸ್ ನಲ್ಲಿದ್ದು ಬಳಿಕ ಬಿಜೆಪಿ ಸೇರಿದ್ದ ಜಿ.ದೇವರಾಜೇ ಗೌಡ ಮತ್ತು ಎ.ಮಂಜು ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿ ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಅಕ್ರಮವಾಗಿ ಜಯ ಗಳಿಸಿದ್ದಾರೆ ಎಂದು ವಾದಿಸಿದ್ದರು.