
ಸೆ.18ರಿಂದ 22ರ ವರೆಗೆ ಸಂಸತ್ ನ ವಿಶೇಷ ಅಧಿವೇಶನ – ಜಾರಿಯಾಗುತ್ತಾ ಸಿವಿಲ್ ಕೋಡ್? ಒಂದು ದೇಶ, ಒಂದು ಚುನಾವಣೆ ಘೋಷಣೆಯಾಗುತ್ತಾ?
- ರಾಜಕೀಯ
- August 31, 2023
- No Comment
- 48
ನ್ಯೂಸ್ ಆ್ಯರೋ : ಕೇಂದ್ರ ಸರಕಾರ ಸೆಪ್ಟಂಬರ್ ನಲ್ಲಿ 5 ದಿನಗಳ ವಿಶೇಷ ಸಂಸತ್ ಅಧಿವೇಶನ ನಡೆಸಲು ತೀರ್ಮಾನಿಸಿದೆ. ಸೆಪ್ಟಂಬರ್ 18-22ರ ವರೆಗೆ ಈ ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ಕಾರಣವೇನು?
ಮಣಿಪುರ ಹಿಂಸಾಚಾರದ ವಿರುದ್ಧ ವಿಪಕ್ಷಗಳು ನಡೆಸಿದ ಗದ್ದಲದ ನಡುವೆ ಮುಂಗಾರು ಅಧಿವೇಶನವು ಇತ್ತೀಚೆಗೆ ಮುಕ್ತಾಯ ಕಂಡಿತ್ತು. ಇದೀಗ ಅಧಿವೇಶನ ಕರೆದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ರಚನಾತ್ಮಕ ಚರ್ಚೆ ಮತ್ತು ಸಂವಾದ ನಡೆಯುವ ನಿರೀಕ್ಷೆ ಇದೆ ಜೋಷಿ ಎಕ್ಸ್ (ಟ್ವಿಟರ್) ನಲ್ಲಿ ಹೇಳಿದ್ದಾರೆ.
ಆದರೆ ಸಂಸತ್ ನ ಈ ವಿಶೇಷ ಅಧಿವೇಶನ ಯಾಕಾಗಿ ಕರೆಯಲಾಗಿದೆ ಎನ್ನುವ ನಿರ್ದಿಷ್ಟ ಕಾರಣವನ್ನು ಸಚಿವರು ನೀಡಿಲ್ಲ. ಅಜೆಂಡಾ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಜೊತೆಗೆ ಯೂನಿಫಾರ್ಮ್ ಸಿವಿಲ್ ಕೋಡ್ ಅಳವಡಿಕೆ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ ಒಂದು ದೇಶ, ಒಂದು ಚುನಾವಣೆ ಕುರಿತು ಮಸೂದೆ ಆರಂಭವಾಗುವ ನಿರೀಕ್ಷೆ ಇದೆ.
ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ವಿಶೇಷ ಕಲಾಪಗಳು ನಡೆಯಲಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ವಾಪಸ್ ನೀಡಲು ಮತ್ತು ಶೀಘ್ರ ಚುನಾವಣೆ ನಡೆಸಲು ಕಾಲಮಿತಿ ಸಿದ್ದಪಡಿಸಲಾಗುವುದು ಎಂದು ಸುಪ್ರಿಂ ಕೋರ್ಟ್ ಗೆ ಕೇಂದ್ರ ಭರವಸೆ ನೀಡಿದ ಬೆನ್ನಲ್ಲೇ ಈ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಕುರಿತಾದ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ವಿಶೇಷ ಅದಿವೇಶನವನ್ನು ಗಣೇಶ ಚತುರ್ಥಿ ಸಂದರ್ಭದಲ್ಲೇ ಆಯೋಜಿಸಿ ಹಿಂದೂ ಭಾವನೆಗಳಿಗೆ ದಕ್ಕೆ ತರಲಾಗಿದೆ ಎಂದು ರಾಜ್ಯಸಭೆ ಸಂಸದೆ ಮತ್ತು ಉದ್ದವ್ ಠಾಕ್ರೆ ಬಣದ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.