
ವೇದಿಕೆ ಮೇಲೆಯೇ ನಾಯಕಿಗೆ ಚುಂಬಿಸಿದ ಚಿತ್ರ ನಿರ್ದೇಶಕ – ಪ್ರಿಯಾಂಕಾ ಚೋಪ್ರಾ ಸಂಬಂಧಿಗೆ ಕಿಸ್ ಮಾಡಿದ್ಯಾರು? ವೀಡಿಯೋ ವೈರಲ್..
- ಮನರಂಜನೆ
- August 31, 2023
- No Comment
- 89
ನ್ಯೂಸ್ ಆ್ಯರೋ : ಕೆಲವು ಚಿತ್ರತಂಡದವರು ಪ್ರಚಾರಕ್ಕಾಗಿ ಏನು ಮಾಡಲು ಬೇಕಾದರೂ ಹೇಸುವುದಿಲ್ಲ ಎನ್ನುವ ಮಾತಿದೆ. ಅದಕ್ಕೆ ಪೂರಕವಾಗಿ ಘಟನೆಯೊಂದು ನಡೆದಿದೆ. ಚಿತ್ರದ ನಾಯಕಿಗೆ ವೇದಿಕೆ ಮೇಲೆಯೇ ನಿರ್ದೇಶಕ ದಿಢೀರ್ ಮುತ್ತು ನೀಡಿದ ವೀಡಿಯೋ ವೈರಲ್ ಆಗಿದೆ. ನಿರ್ದೇಶಕನ ನಡೆಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ.
ಏನಿದು ಘಟನೆ?
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿ ಮನ್ನಾರ ಚೋಪ್ರಾ ತೆಲುಗಿನ ‘ತಿರಗಬದರ ಸಾಮಿ’ ಚಿತ್ರದಲ್ಲಿ ನಟಿಸಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ತಂಡ ಪ್ರಚಾರದಲ್ಲಿ ತೊಡಗಿದೆ. ಹೀಗಾಗಿ ಮನ್ನಾರ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ನಿರ್ದೇಶಕ ರವಿ ಕುಮಾರ್ ವೇದಿಕೆ ಮೇಲೆ ದಿಢೀರ್ ಆಗಿ ಕೆನ್ನೆಯನ್ನು ಚುಂಬಿಸಿದರು.
ಅನಿರೀಕ್ಷಿತ ಘಟನೆಯಿಂದ ಮನ್ನಾರ ಒಂದು ಕ್ಷಣ ಶಾಕ್ ಆಗಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ತಕ್ಷಣ ಚೇತರಿಸಿಕೊಂಡ ಅವರು ಬಳಿಕ ಕ್ಯಾಮರಾಕ್ಕೆ ಫೋಸ್ ನೀಡಿ ನಗೆ ಬೀರಿದರು.
ಈ ವೀಡಿಯೋ ವೀಕ್ಷಿಸಿದ ಅನೇಕರು ರವಿ ಕುಮಾರ್ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಮನ್ನಾರ ಎಷ್ಟು ಮುಜುಗರ ಅನುಭವಿಸಿರಬಹುದು ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ, ಮೇಲ್ನೋಟಕ್ಕೆ ಆಕೆ ಮುಜುಗರವನ್ನು ತೋರಿಸಿಕೊಳ್ಳದಿದ್ದರೂ ಒಳಗೊಳಗೆ ಮುಜುಗರ ಅನುಭವಿಸುತ್ತಿರಬಹುದು ಎಂದಿದ್ದಾರೆ. ಇಂತಹ ಮೀಟೂ ಪ್ರಕರಣವನ್ನು ಆದಷ್ಟು ಎಳವೆಯಲ್ಲೇ ಚಿವುಟಬೇಕು ಎಂದು ಮಗದೊಬ್ಬರು ಸಲಹೆ ನೀಡಿದ್ದಾರೆ.
ದಿಲ್ ರಾಜು ನಿರ್ಮಾಣದ ‘ತಿರಗಬದರ ಸಾಮಿ’ ಚಿತ್ರದಲ್ಲಿ ನಾಯಕನಾಗಿ ರಾಜ್ ತರುಣ್ ನಟಿಸುತ್ತಿದ್ದಾರೆ. ಮಕರಂದ ದೇಶಪಾಂಡೆ ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ಟೀಸರ್ ಈಗಾಗಲೆ ಬಿಡುಗಡೆಯಾಗಿದೆ.
2014ರಲ್ಲಿ ತೆರೆಕಂಡ ತೆಲುಗಿನ ‘ಪ್ರೇಮ ಗೀಮ ಜಾಂತ ನಹಿ’ ಸಿನಿಮಾ ಮೂಲಕ ಮನ್ನಾರ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡ ಮತ್ತು ತೆಲುಗಿನಲ್ಲಿ 2017ರಲ್ಲಿ ಬಿಡುಗಡೆಯಾದ ‘ರೋಗ್’ ಚಿತ್ರದಲ್ಲೂ ಮನ್ನಾರ ನಟಿಸಿದ್ದಾರೆ.