
ಕೇವಲ ಒಂದೇ ದಿನದಲ್ಲಿ LIC ಕಂಪನಿಗೆ 1,400 ಕೋಟಿ ನಷ್ಟ – ಅದಾನಿ ಕಂಪನಿಗೂ 35000 ಕೋಟಿ ಅಟ್ಟರ್ ಲಾಸ್…!
- ರಾಷ್ಟ್ರೀಯ ಸುದ್ದಿ
- September 2, 2023
- No Comment
- 58
ನ್ಯೂಸ್ ಆ್ಯರೋ : ಅದಾನಿ ಗ್ರೂಪ್ ನ ಹೂಡಿಕೆದಾರ ಭಾರತೀಯ ಜೀವವಿಮಾ ನಿಗಮ (LIC) ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಕೇವಲ ಒಂದೇ ಒಂದು ದಿನದಲ್ಲಿ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಎಲ್‌ಐಸಿಯು (LIC) ಅದಾನಿ ಕಂಪೆನಿಯಿಂದಾಗಿ 1,400 ಕೋಟಿ ರೂ. ನಷ್ಟಕ್ಕೆ ಒಳಗಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆಗಳ (OCCRP) ವರದಿ ಅದಾನಿ ಸಮೂಹಕ್ಕೆ ಬಾರೀ ಹೊಡೆತ ಕೊಟ್ಟಿದೆ. ಬಿಲಿಯನೇರ್ ಗೌತಮ್ ಅದಾನಿ (Gautham Adani) ಮತ್ತು ಅವರ ಪೋರ್ಟ್-ಟು-ಎನರ್ಜಿ ಗ್ರೂಪ್ ವಿರುದ್ಧ OCCRP ತನ್ನ ವರದಿಯಲ್ಲಿ ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಗಳನ್ನು ಮಾಡಿದೆ. ಅದಾನಿ ಸಮೂಹದ ಷೇರುಗಳು ಪಾತಾಳಕ್ಕೆ ಕುಸಿಯಲು ಆರಂಭಿಸಿದ್ದು, ಎಲ್‌ಐಸಿ ಕ್ಷಣಾರ್ಧದಲ್ಲಿಯೇ 1,400 ಕೋಟಿ ರೂ. ನಷ್ಟಕ್ಕೆ ಒಳಗಾಗಿದೆ.
ಅಷ್ಟಕ್ಕೂ ಅದಾನಿ ಸಮೂಹದ ಷೇರುಗಳ ಕುಸಿತಕ್ಕೂ ಭಾರತೀಯ ಜೀವ ವಿಮಾ ನಿಗಮಕ್ಕೂ ಇರುವ ಸಂಬಂಧವೇನು ಅಂತಾ ಅಚ್ಚರಿಯಾಗಬಹುದು. ಆದರೆ ವಿಚಾರ ಇರುವುದೇ ಇಲ್ಲಿ. ಭಾರತೀಯ ಜೀವ ವಿಮಾ ಕಂಪೆನಿ ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಅದಾನಿ ಕಂಪೆನಿಯ ಷೇರುಗಳು ಕುಸಿತದ ಬೆನ್ನಲ್ಲೇ ಎಲ್‌ಐಸಿ ಕೂಡ ನಷ್ಟಕ್ಕೆ ಒಳಗಾಗಿದೆ.
ಎನ್‌ಎಸ್‌ಇಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇ.3.51ರಷ್ಟು ಕುಸಿದಿವೆ. ಅದಾನಿ ಟೋಟಲ್ ಗ್ಯಾಸ್ ಷೇರುಗಳು ಶೇಕಡಾ 2.24 ರಷ್ಟು ಕುಸಿದವು. ಅದಾನಿ ಎನರ್ಜಿ ಸಲ್ಯೂಷನ್ಸ್‌ನ ಷೇರಿನ ಬೆಲೆಯು ಶೇಕಡಾ 3.53 ರಷ್ಟು ಕುಸಿದಿದೆ. ಅದಾನಿ ಗ್ರೀನ್ ಎನರ್ಜಿಯ ಷೇರಿನ ಬೆಲೆಯು ಶೇಕಡಾ 3.76 ರಷ್ಟು ಕಡಿಮೆಯಾಗಿದೆ. ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಷೇರುಗಳು ಶೇ.3.18ರಷ್ಟು ಕುಸಿದವು. ಆಗಸ್ಟ್ 31 ರಂದು ಎಸಿಸಿ ಷೇರುಗಳು ಶೇ.0.73, ಅಂಬುಜಾ ಸಿಮೆಂಟ್ಸ್ ಶೇ.3.66, ಎನ್‌ಡಿಟಿವಿ ಶೇ.1.92, ಅದಾನಿ ಪವರ್ ಶೇ.1.93 ಮತ್ತು ಅದಾನಿ ವಿಲ್ಮರ್ ಶೇ.2.70ರಷ್ಟು ಕುಸಿದಿದೆ.
ಇದೇ ವೇಳೆ ಅದಾನಿ ಸಮೂಹವು ಗುರುವಾರ 35,000 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ವಿನಿಮಯದ ಮಾಹಿತಿಯ ಪ್ರಕಾರ, ಆಗಸ್ಟ್ 30, 2023 ರಂತೆ ಎಲ್ಲಾ 10 ಷೇರುಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು ಸುಮಾರು 10.84 ಲಕ್ಷ ಕೋಟಿ ರೂ. ಆದರೆ ಆಗಸ್ಟ್ 31 ರಂದು ಸುಮಾರು 10.49 ಲಕ್ಷ ಕೋಟಿಗೆ ಕುಸಿದಿದೆ. ಅಂದರೆ, ಒಂದೇ ದಿನದಲ್ಲಿ ಅದಾನಿ ಗ್ರೂಪ್ ಸುಮಾರು 35,000 ಕೋಟಿ ನಷ್ಟ ಅನುಭವಿಸಿದೆ.