ಡಿ.8ರಿಂದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ..! – ಕಾರ್ಯಕ್ರಮಗಳ ವಿವರ ಇಲ್ಲಿದೆ ನೋಡಿ…

ನ್ಯೂಸ್ ಆ್ಯರೋ : ತುಳುನಾಡಿನ ಜನರು ವಿಶೇಷವಾಗಿ ದೇವರು- ದೈವಗಳ ಮೇಲೆ ಹೆಚ್ಚಿನ ಭಕ್ತಿಯನ್ನು ಇಟ್ಟುಕೊಂಡಿರುತ್ತಾರೆ. ಅಷ್ಟೇ ನಂಬಿಕೆ ಕೂಡಾ. ದೀಪಾರಾಧನೆ, ದೀಪಾರ್ಪಣೆ, ದೀಪೋತ್ಸವಕ್ಕೆ ಸೂಕ್ತವಾದ ಮಾಸವೇ ಕಾರ್ತಿಕ ಮಾಸ. ಈ ಬಾರಿ ಕಾರ್ತಿಕ ಮಾಸವು ನವೆಂಬರ್‌ 14 ರಿಂದ ಪ್ರಾರಂಭವಾಗಿ ಡಿಸೆಂಬರ್‌ 12 ರಂದು ಕೊನೆಗೊಳ್ಳುತ್ತದೆ. ಈ ಮಾಸವು ಶಿವನಿಗೆ ಅತಿ ಪ್ರಿಯ. ಹೀಗಾಗಿ ಈಗಾಗಲೇ ರಾಜ್ಯದ ವಿವಿಧ ಶಿವನ ದೇವಾಲಯಗಳಲ್ಲಿ ದೀಪೋತ್ಸವಗಳು ನಡೆಯುತ್ತಿದೆ.
ದ.ಕ ಜಿಲ್ಲೆಯ ಧರ್ಮಸ್ಥಳ ದೇವಸ್ಥಾನ ಪ್ರಮುಖ ಇತಿಹಾಸ ಪ್ರಸಿದ್ಧ ದೇಗುಲಗಳಲ್ಲಿ ಒಂದು. ಇಲ್ಲಿಯ ದೀಪೋತ್ಸವ ಎಂದರೆ ಅದಕ್ಕೆ ಎಷ್ಟೋ ಸಮಯಗಳ ಹಿಂದಿನ ಪೂರ್ವ ಸಿದ್ಧತೆ.

ಕರ್ನಾಟಕದಲ್ಲೇ ಕಾರ್ತಿಕ ಮಾಸದ ದೀಪೋತ್ಸವಕ್ಕೆ ಹೆಸರಾದ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೀಪೋತ್ಸವದ ಕಾರ್ಯಕ್ರಗಳು ಡಿಸೆಂಬರ್‌ ಎಂಟರಿಂದ ಆರಂಭಗೊಳ್ಳಲಿದ್ದು, ಡಿಸೆಂಬರ್‌ 12 ರಂದು ಲಕ್ಷ ದೀಪೋತ್ಸವ ನಡೆಯಲಿದೆ. ಅತಿ ಅದ್ಧೂರಿ ಹಾಗೂ ವಿಜೃಂಭಣೆಯಿಂದ ನಡೆಯುವ ಈ ದೇವತಾ ಕಾರ್ಯವು ಇತರೆ ಉತ್ಸವಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.

ದೀಪೋತ್ಸವ ಎಷ್ಟು ದಿನಗಳ ಕಾಲ ನಡೆಯುತ್ತದೆ..?

ಐದು ದಿನಗಳ ಕಾಲ ಮಂಜುನಾಥಸ್ವಾಮಿಯ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ. ಲಕ್ಷ ದೀಪೋತ್ಸವದ ಜೊತೆಗೆ ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ಕೂಡ ನಡೆಲಿದೆ. ಜೊತೆಗೆ ಖ್ಯಾತ ವಿದ್ವಾಂಸರು, ಗಣ್ಯರು ಹಾಗೂ ಕಲಾವಿದರ ಸಹಭಾಗಿತ್ವದಲ್ಲಿ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು ಕೂಡ ನಡೆಯಲಿದೆ.

ಲಕ್ಷ ದೀಪೋತ್ಸವದ ಆರು ದಿನಗಳ ಕಾರ್ಯಕ್ರಮದ ವಿವರ

ಡಿಸೆಂಬರ್‌ 8 ಶುಕ್ರವಾರ ಧರ್ಮಸ್ಥಳದ ಹೊಸಕಟ್ಟೆ ಉತ್ಸವ ನಡೆಯಲಿದೆ.
ಡಿಸೆಂಬರ್‌ 9 ಶನಿವಾರ ಧರ್ಮಸ್ಥಳದ ಕೆರೆಕಟ್ಟೆ ಉತ್ಸವ ನಡೆಯಲಿದೆ.
ಡಿಸೆಂಬರ್‌ 10 ಭಾನುವಾರ ಲಲಿತೋದ್ಯಾನ ಉತ್ಸವ ನಡೆಯಲಿದೆ.

ಡಿಸೆಂಬರ್‌ 11 ಸೋಮವಾರ ಕಂಚಿಮಾರುಕಟ್ಟೆ ಉತ್ಸವ ನಡೆಯಲಿದೆ.
ಡಿಸೆಂಬರ್‌ 12 ಮಂಗಳವಾರ ಗೌರಿಮಾರುಕಟ್ಟೆ ಉತ್ಸವ ಹಾಗೂ ಲಕ್ಷದೀಪೋತ್ಸವ ನಡೆಯಲಿದೆ.
ಡಿಸೆಂಬರ್‌ 13 ಬುಧವಾರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಆವರಣದಲ್ಲಿ ಸಂಜೆ 7 ರಿಂದ ಸಮವಸರಣ ಪೂಜೆ ನಡೆಯಲಿದೆ.

ಸರ್ವಧರ್ಮ ಸಮ್ಮೇಳನದ ವಿವರ:

ಡಿಸೆಂಬರ್‌ 11 ಸೋಮವಾರದಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ. ಗುರುರಾಜ ಕರ್ಜಗಿ ಉದ್ಘಾಟಿಸಲಿದ್ದಾರೆ. ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸರ್ವಧರ್ಮ ಸಮ್ಮೇಳನದಲ್ಲಿ ರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿ ಡಾ. ಎಂ. ಆರ್. ವೆಂಕಟೇಶ್, ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥ ವಿಜಯಪುರದ ಮಹಮ್ಮದ್ ಗೌಸ್ ಹವಾಲ್ದಾರ ಭಾಗಿಯಾಗಲಿದ್ದಾರೆ.

ಡಿಸೆಂಬರ್‌ 11 2 ರಂದು ಮಂಗಳವಾರ ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬೆಂಗಳೂರಿನ ಇಸ್ರೋದ ಅಧ್ಯಕ್ಷ ಡಾ. ಎಸ್. ಸೋಮನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಖ್ಯಾತ ಗಮಕಿ ಡಾ.ಎ.ವಿ. ಪ್ರಸನ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹೊನ್ನಾವರದ ನಿವೃತ್ತ ಉಪನ್ಯಾಸಕ ಡಾ. ಶ್ರೀಪಾದ ಶೆಟ್ಟಿ, ಬೆಂಗಳೂರಿನ ರಂಗಕರ್ಮಿ ಪ್ರಕಾಶ್ ಬೆಳವಡಿ ಮತ್ತು ಬಂಟ್ವಾಳದ ಡಾ. ಅಜಕ್ಕಳ ಗಿರೀಶ್ ಭಟ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಡಿಸೆಂಬರ್‌ 10 ರಂದು ಭಾನುವಾರ ರಾತ್ರಿ 7 ರಿಂದ 10ರ ವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಗಾನ, ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

ಒಟ್ಟಾರೆಯಾಗಿ ಈ ಬಾರಿಯೂ ಧರ್ಮಸ್ಥಳ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಅನೇಕ ಅತಿಥಿ ಗಣ್ಯರು ಕೂಡಾ ಭಾಗವಹಿಸಲಿದ್ದಾರೆ.