ಮದುವೆಗೆ ಸಜ್ಜಾದ್ರು‌ ಮುಂಗಾರು ಮಳೆ ಬೆಡಗಿ – ಕನ್ನಡ ಕಲಿಸಿದ ಗುರುವಿನ ಕೈ ಹಿಡಿಯಲಿದ್ದಾರಂತೆ ಪೂಜಾ ಗಾಂಧಿ!

ನ್ಯೂಸ್ ಆ್ಯರೋ : ಯೋಗರಾಜ್ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಸಿನಿಮಾ‌ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಮೈಲುಗಲ್ಲು ಸ್ಥಾಪಿಸಿತ್ತು. ಜೊತೆಗೆ ಈ ಸಿನಿಮಾದಲ್ಲಿ ನಟಿಸಿದ ಪೂಜಾ‌ ಗಾಂಧಿಗೂ ಕೂಡ ಈ ಚಿತ್ರ ದೊಡ್ಡ ಯಶಸ್ಸು‌ ತಂದು ಕೊಟ್ಟಿತ್ತು. ಮುಂಗಾರು ಮಳೆ ಬಳಿಕ ಪೂಜಾ ಗಾಂಧಿ ಕನ್ನಡದವರೇ ಆಗಿ ಹೋದರು. ಸಾಕಷ್ಟು ಅವಕಾಶಗಳು ಅವರನ್ನು ಅರಸಿ ಬಂದವು. ಇದೀಗ ಮಳೆ ಹುಡುಗಿ ಪೂಜಾ ಗಾಂಧಿ ಮದುವೆಗೆ ಸಜ್ಜಾಗಿದ್ದಾರೆ. ಬೆಂಗಾಲಿ ಬೆಡಗಿ ಪೂಜಾ ತಮಗೆ ಕನ್ನಡ ಕಲಿಸಿದ ಗುರುವನ್ನೇ ವಿವಾಹವಾಗಲು ಹೊರಟಿದ್ದಾರೆ ಎನ್ನಲಾಗಿದೆ.

ಮಂತ್ರ ಮಾಂಗಲ್ಯ ಮೂಲಕ ಪೂಜಾ ಗಾಂಧಿ ಮದುವೆ!

ಬಂಗಾಳಿ ಮೂಲದ ಹುಡುಗಿ ಪೂಜಾ ಗಾಂಧಿ ಬೆಂಗಳೂರಿಗೆ ಬಂದು ಸಿನಿಮಾ ಕ್ಷೇತ್ರ ಪ್ರವೇಶಿಸಿದಾಗ ವಿಜಯ್ ಅವರೇ ಕನ್ನಡ ಮಾತನಾಡಲು ಕಲಿಸಿದ್ರು ಎಂದು ಹೇಳಲಾಗಿದೆ. ವಿಜಯ್‌ ನೆರವಿನಿಂದ ಪೂಜಾ ಗಾಂಧಿ ಕನ್ನಡ ಕಲಿತಿದ್ದರು. ತಾವೇ ಸ್ವತಃ ಕನ್ನಡ ಕಲಿತು ಕನ್ನಡ ಸಿನಿಮಾದಲ್ಲಿ ನಟನೆ ಮತ್ತು ಡಬ್ಬಿಂಗ್‌ ಮಾಡಿದ್ದಾರೆ. ಇದೀಗ, ಪೂಜಾ ತಮ್ಮ ಗುರುವನ್ನು ವಿವಾಹವಾಗಲು ಸಜ್ಜಾಗಿದ್ದು, ನವೆಂಬರ್ 29ರಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗಲಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

2012ರಲ್ಲೇ ಪೂಜಾ ಗಾಂಧಿ ನಿಶ್ಚಿತಾರ್ಥ!

ಮುಂಗಾರು ಮಳೆ ಸಿನಿಮಾದ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದ ಪೂಜಾ ಗಾಂಧೀ ಅದೇ ಸಮಯದಲ್ಲಿ ಅಂದರೆ 2012ರಲ್ಲಿ ಕೈಗಾರಿಕೋದ್ಯಮಿ ಆನಂದ್ ಗೌಡ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಇದಾದ ಒಂದೇ ತಿಂಗಳಿಗೆ ಈ ಸಂಬಂಧ ಮುರಿದು ಬಿತ್ತು. ಬೆಂಗಳೂರಿನ ಕತ್ರಿಗುಪ್ಪೆಯ ನಿವಾಸದಲ್ಲಿ ಉದ್ಯಮಿ ಆನಂದ್‌ ಗೌಡ ಜತೆ ನಿಶ್ಚಿತಾರ್ಥ ನಡೆದಿತ್ತು. ಪೂಜಾ ಗಾಂಧಿ ಆಪ್ತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದರು. ಇದಕ್ಕೂ ಮೊದಲು ಸಿನಿಮಾ ವಿತರಕರಾದ ಡಾ. ಕಿರಣ್‌ ಜತೆ ಪೂಜಾ ಗಾಂಧಿ ವಿವಾಹವಾಗಿದ್ದಾರೆ ಎನ್ನುವುದು ಸಂಚಲನ ಸೃಷ್ಟಿಸಿತ್ತು.

ಯಲಹಂಕದಲ್ಲಿ ಪೂಜಾ ಗಾಂಧಿ ವಿವಾಹ!

ಮೂಲಗಳ ಪ್ರಕಾರ ಸದ್ಯ, ಪೂಜಾ ಗಾಂಧಿ ಅವರು ತಮ್ಮ ಕನ್ನಡ ಗುರು ವಿಜಯ್ ಅವರನ್ನು ಮದುವೆಯಾಗಲು ಸಜ್ಜಾಗಿದ್ದಾರೆ. ಇದೇ ನವೆಂಬರ್ 29ರಂದು ಪೂಜಾ ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಮೂಲಕ ವಿಜಯ್ ಅವರ ಕೈ ಹಿಡಿಯಲಿದ್ದಾರಂತೆ‌. 2006ರಲ್ಲಿ ಬಿಡುಗಡೆಯಾದ ಮುಂಗಾರು ಮಳೆ ಸಿನಿಮಾ‌ ಮೂಲಕ ಕನ್ನಡ ಸಿನಿ ರಂಗಕ್ಕೆ ಎಂಟ್ರಿ ನೀಡಿದ್ದ ಪೂಜಾ ಆ ಬಳಿಕ ಕನ್ನಡತಿಯೇ ಆಗಿ ಹೋದರು‌. ಇದೀಗ ಕನ್ನಡ ನೆಲದಲ್ಲೇ ಮದುವೆಗೂ ಸಜ್ಜಾಗಿದ್ದಾರೆ. ‌‌