ಮಂಗಳೂರು : ಅನ್ಯಕೋಮಿನ ಜೋಡಿಯನ್ನು ಬೆನ್ನಟ್ಟಿದ ಭಜರಂಗಿಗಳು – ನೈತಿಕ ಪೊಲೀಸ್ ಗಿರಿಯ ವಿರುದ್ಧ ಪ್ರಕರಣ ದಾಖಲು, ಇಬ್ಬರು ಅರೆಸ್ಟ್!

ನ್ಯೂಸ್ ಆ್ಯರೋ : ಕೋಮು ಸೂಕ್ಷ್ಮ ಪ್ರದೇಶ ಎನಿಸಿಕೊಂಡ ಮಂಗಳೂರಿನಲ್ಲಿ ಹಿಂದು ಯುವತಿಯ ಜೊತೆ ಮುಸ್ಲಿಂ ಯುವಕ ಸುತ್ತಾಡುವುದನ್ನು ಗಮನಿಸಿ ಬಜರಂಗದಳದ ಕಾರ್ಯಕರ್ತರು ಬೈಕಿನಲ್ಲಿ ಬೆನ್ನಟ್ಟಿ ನೈತಿಕ‌ ಪೊಲೀಸ್ ಗಿರಿ ಪ್ರದರ್ಶಿಸಿದ ಘಟನೆ ನಗರದ ಮೋರ್ಗನ್ಸ್ ಗೇಟ್ ನಲ್ಲಿ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಅಲ್ಲದೇ ಇಬ್ಬರನ್ನು ಪೋಲಿಸರು ಬಂಧಿಸಿದ್ದಾರೆ. ಈ ಪ್ರಕರಣದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಮಂಕಿಸ್ಟಾಂಡ್ ಯುವಕ, ಚಿಕ್ಕಮಗಳೂರಿನ ಯುವತಿ!

ಮಂಗಳೂರು ನಗರದ ಮಂಕಿಸ್ಟಾಂಡ್ ನಲ್ಲಿ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಹಾಗೂ ಚಿಕ್ಕಮಗಳೂರಿನ ಅನ್ಯಕೋಮಿನ ಯುವತಿ ಜೊತೆಯಾಗಿ ಸುತ್ತಾಡುತ್ತಿದ್ದರು. ಇದನ್ನು ಗಮನಿಸಿದ ಭಜರಂಗದಳ ಕಾರ್ಯಕರ್ತರು ಸ್ಕೂಟರ್ ಮೂಲಕ ಹಿಂಬಾಲಿಸಿ ನಿಲ್ಲಿಸಿ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಡುರಸ್ತೆಯಲ್ಲಿ ಘರ್ಜಿಸಿದ ಭಜರಂಗಿಗಳು!

ನಗರದಲ್ಲಿ ಜೊತೆಯಾಗಿ ಸುತ್ತಾಡುತ್ತಿದ್ದ ಅನ್ಯಕೋಮಿನ ಜೋಡಿಯನ್ನು ಸ್ಕೂಟರ್ ಮೂಲಕ ಹಿಂಬಾಲಿಸಿ ಅಡ್ಡ ಹಾಕಿದ ಭಜರಂಗದಳದ ಕಾರ್ಯಕರ್ತರು ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಎರಡೂ ಕೋಮಿನ ಯುವಕರು ಸ್ಥಳಕ್ಕೆ ಜಮಾಯಿಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ಹದಗೊಳಿಸಲು ಹರಸಾಹಸಪಟ್ಟರು.ನಂತರ ಜೋಡಿಯನ್ನು ವಶಕ್ಕೆ ಪಡೆದುಕೊಂಡರು ಎನ್ನಲಾಗಿದೆ.

ಭಜರಂಗಿಗಳು ಅರೆಸ್ಟ್!

ನಗರದ ನಡು ರಸ್ತೆಯಲ್ಲಿ ಜೋಡಿಯನ್ನು ತಡೆದು ನೈತಿಕ‌‌ ಪೊಲೀಸ್ ಗಿರಿ‌ಪ್ರದರ್ಶಿಸಿದ ಭಜರಂಗದಳದ ಕಾರ್ಯಕರ್ತರಾದ ಅಕ್ಷಯ್ ರಾವ್ ಹಾಗೂ ಶಿಬಿನ್ ಪಡಿಕಲ್ ಅವರನ್ನು ಐಪಿಸಿ ಸೆಕ್ಷನ್ 341, 354 ರ ಅಡಿ ಪ್ರಕರಣ ದಾಖಲಿಸಿ ಪಾಂಡೇಶ್ವರ ಪೊಲೀಸರು‌ ಬಂಧಿಸಿದ್ದಾರೆ. ಬಂಧಿತರನ್ನು‌ ಪೊಲೀಸರು ಇದೀಗ ವಿಚಾರಣೆ ನಡೆಸುತ್ತಿದ್ದು, ಈ ಪ್ರಕರಣ ಯಾವ‌ ಹಂತ ತಲುಪಲಿದೆ‌ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.