ಭವಿಷ್ಯದಲ್ಲಿ ಕಾರ್ ಖರೀದಿಸುವ ಪ್ಲಾನ್ ನಲ್ಲಿದ್ದೀರಾ..? – ಹಾಗಾದ್ರೆ ಲೇಟ್ ಮಾಡ್ಬೇಡಿ, ಜನವರಿಯಿಂದ ದುಬಾರಿಯಾಗಲಿದೆಯಂತೆ…!

ನ್ಯೂಸ್ ಆ್ಯರೋ : ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ತಾನು ಎತ್ತರಕ್ಕೆ ಬೆಳೆಯಬೇಕು. ಶ್ರೀಮಂತ ಬದುಕು ಸಾಗಿಸಬೇಕು. ಕಾರು ಖರೀದಿಸಬೇಕು…ಹೀಗೆ ಏನೇನೋ ಆಸೆಗಳಿರುತ್ತದೆ. ಆದರೆ ಅದಕ್ಕೆ ದುಬಾರಿ ಬೆಲೆ ಆದರೆ ನಿರಾಶೆಯೂ ಆಗುತ್ತದೆ.

ಅಂದ ಹಾಗೆ ಈಗಾಗಲೇ ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಕಾರಣ ಅನಿವಾರ್ಯವಾಗಿ ಕಾರುಗಳ ಬೆಲೆ ಏರಿಕೆ ಮಾಡಬೇಕಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಇಂದು ಘೋಷಿಸಿದೆ. ಇದೇ ರೀತಿ ಆಡಿ ಕಂಪನಿ ಕೂಡ ಶೇಕಡ 2 ರಷ್ಟು ದರ ಏರಿಸುವುದಾಗಿ ಘೋಷಣೆ ಮಾಡಿದೆ. ಮಾರುತಿ ಸುಜುಕಿ ಕಂಪನಿಯ ಕಾರುಗಳ ಬೆಲೆ 2024ರ ಜನವರಿ 1ರಿಂದ ಹೆಚ್ಚಳವಾಗಲಿದೆ. ಈ ಬೆಲೆ ಏರಿಕೆಯ ವಿಚಾರವನ್ನು ಮಾರುತಿ ಸುಜುಕಿ ಕಂಪನಿಯು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ)ಗೆ ಸಲ್ಲಿಸಿದ ದಾಖಲೆಗಳಲ್ಲಿ ತಿಳಿಸಿದೆ.

ಅನಿವಾರ್ಯ ಒತ್ತಡಗಳ ಕಾರಣ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ವಿವರಿಸಿದೆ. ಒಟ್ಟಾರೆ ಹಣದುಬ್ಬರ ಮತ್ತು ಕಚ್ಚಾ ಸರಕುಗಳ ಬೆಲೆ ಹೆಚ್ಚಳದಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಈ ವೆಚ್ಚದ ಒತ್ತಡ ಸರಿದೂಗಿಸುವುದಕ್ಕಾಗಿ 2024ರ ಜನವರಿಯಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ಕಂಪನಿಯು ಯೋಜಿಸಿದೆ. ಕಂಪನಿಯು ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹೆಚ್ಚಳವನ್ನು ಸರಿದೂಗಿಸಲು ಗರಿಷ್ಠ ಪ್ರಯತ್ನಗಳನ್ನು ಮಾಡಿದೆ.

ಆದಾಗ್ಯೂ, ಅನಿವಾರ್ಯವಾಗಿ ಸ್ವಲ್ಪ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಬೇಕಾಗುತ್ತದೆ ಎಂದು ಮಾರುತಿ ಸುಜುಕಿ ಇಂಡಿಯಾ ಇಂದು (ನ.27) ಸ್ಟಾಕ್‌ ಎಕ್ಸ್‌ಜೇಂಚ್‌ಗಳಿಗೆ ತಿಳಿಸಿದೆ.

ಪ್ರಸ್ತಾವಿತ ಬೆಲೆ ಹೆಚ್ಚಳ ಪ್ರಮಾಣ ಎಷ್ಟು..?

ಮಾರುತಿ ಸುಜುಕಿ ಇಂಡಿಯಾ ತನ್ನ ಆರಂಭಿಕ ಹಂತದ ಮಾರುತಿ ಆಲ್ಟೋ ಕಾರಿನಿಂದ ಹಿಡಿದು ಮಲ್ಟಿ-ಯುಟಿಲಿಟಿ ವೆಹಿಕಲ್ ಇನ್ವಿಕ್ಟೋವರೆಗೆ 3.54 ಲಕ್ಷ ಮತ್ತು 28.42 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ಬೆಲೆಯ ವಾಹನಗಳ ಶ್ರೇಣಿಯನ್ನು ಮಾರಾಟ ಮಾಡುತ್ತಿದೆ. ಈ ವಾಹನಗಳ ಪ್ರಸ್ತಾವಿತ ಬೆಲೆ ಏರಿಕೆ ಪ್ರಮಾಣವನ್ನು ಕಂಪನಿಯು ನಿರ್ದಿಷ್ಟವಾಗಿ ಹೇಳಿಲ್ಲ. ಈ ಬೆಲೆ ಏರಿಕೆ ಮಾದರಿಯಿಂದ ಮಾದರಿಗೆ ವ್ಯತ್ಯಯವಾಗಲಿದೆ ಎಂದು ಕಂಪನಿ ಹೇಳಿದೆ.

ಮಾರುತಿ ಸುಜುಕಿ ಕಂಪನಿಯು ಏಪ್ರಿಲ್ 1ರಂದು ತನ್ನ ಎಲ್ಲ ಮಾದರಿ ವಾಹನಗಳ ಬೆಲೆಯನ್ನು ಹೆಚ್ಚಳ ಮಾಡಿತ್ತು. ಇದಕ್ಕೂ ಮೊದಲು ಈ ವರ್ಷ ಜನವರಿಯಲ್ಲಿ ಕೂಡ ತನ್ನ ಎಲ್ಲ ವಾಹನಗಳ ಬೆಲೆಗಳನ್ನು ಶೇಕಡ 1.1 ಹೆಚ್ಚಳ ಮಾಡಿತ್ತು.

ಗರಿಷ್ಠ ಮಾಸಿಕ ಮಾರಾಟ ದಾಖಲೆ ಬರೆದ ಮಾರುತಿ ಸುಜುಕಿ ಇಂಡಿಯಾ

ಇದೇ ವೇಳೆ, ಅಕ್ಟೋಬರ್ 2023ರಲ್ಲಿ ಮಾರುತಿ ಸುಜುಕಿ ಇಂಡಿಯಾ ತನ್ನ ವಾಹನಗಳ ಮಾರಾಟದಲ್ಲಿ ಗರಿಷ್ಠ ಮಾಸಿಕ ಮಾರಾಟದ ದಾಖಲೆ ಬರೆದಿದೆ. ಅಕ್ಟೋಬರ್‌ನಲ್ಲಿ ಮಾರುತಿ ಸುಜುಕಿಯ 1,99,217 ವಾಹನಗಳನ್ನು ಮಾರಾಟ ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡ 19 ಬೆಳವಣಿಗೆ ಎಂದು ಕಂಪನಿ ವಿವರಿಸಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ 2022ರ ಅಕ್ಟೋಬರ್‌ನಲ್ಲಿ 1,67,520 ವಾಹ ಮಾರಾಟ ಮಾಡಿತ್ತು. 2021ರ ಅಕ್ಟೋಬರ್‌ನಲ್ಲಿ 1,77,266, 2020ರ ಅಕ್ಟೋಬರ್‌ನಲ್ಲಿ 1,47,072 ವಾಹನಗಳನ್ನು ಮಾರಾಟ ಮಾಡಿತ್ತು.

2023 ರ ಅಕ್ಟೋಬರ್‌ನಲ್ಲಿ ಅದರ ರಫ್ತು 21,951 ವಾಹನಗಳಿಗೆ ಹೋಲಿಸಿದರೆ ಕಳೆದ ವರ್ಷದ ಇದೇ ತಿಂಗಳಲ್ಲಿ 20,448 ವಾಹನಗಳಿಗೆ ಹೋಲಿಸಿದರೆ ಮಾರುತಿ ಸುಜುಕಿ ಇಂಡಿಯಾ ಹೇಳಿದೆ. ಮಾರುತಿ ಸುಜುಕಿ ಇಂಡಿಯಾದ ಷೇರು ಬೆಲೆ ಶುಕ್ರವಾರ 0.072% ಇಳಿದು 10,481 ರೂಪಾಯಿಗೆ ತಲುಪಿತ್ತು.

ಆಡಿ ಕಾರುಗಳ ಬೆಲೆ ಕೂಡ ಜನವರಿಯಿಂದ ಶೇಕಡ 2 ರಷ್ಟು ಏರಿಕೆ…!

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಆಡಿಯು ಮುಂದಿನ ವರ್ಷದ ಜನವರಿಯಿಂದ ಭಾರತದಲ್ಲಿ ತನ್ನ ವಾಹನಗಳ ಬೆಲೆಯನ್ನು ಶೇಕಡಾ 2 ರಷ್ಟು ಹೆಚ್ಚಿಸುವುದಾಗಿ ಸೋಮವಾರ ಘೋಷಿಸಿತು. ಹೆಚ್ಚುತ್ತಿರುವ ಉತ್ಪಾದನಾ ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಕಂಪನಿ ಘೋಷಿಸಿದೆ. ಆಡಿ ಕಂಪನಿಯ ಎಲ್ಲ ಕಾರುಗಳ ಬೆಲೆಯು 2024ರ ಜನವರಿ 1ರಿಂದ ಭಾರತದಲ್ಲಿ ಹೆಚ್ಚಳವಾಗಲಿದೆ ಎಂದು ಆಡಿ ತಿಳಿಸಿದೆ.

ಅಂತೂ ಮಾರುತಿ ಸುಜುಕಿ ಬೆಲೆ ಜನವರಿಯಲ್ಲಿ ಹೆಚ್ಚಾಗುತ್ತದೆ ಎಂದು ಸ್ವತಃ ಕಂಪೆನಿಯೇ ಘೋಷಣೆ ಮಾಡಿದೆ. ಖರೀದಿಸಲು ಬಯಸುವವರು ಅದಕ್ಕೂ ಮುನ್ನ ಖರೀದಿಸಿದರೆ ನಿಮ್ಮದೇ ಬಜೆಟ್ ನಲ್ಲಿ ಕಾರನ್ನು ಕೊಂಡುಕೊಳ್ಳಬಹುದು‌.