ಕಡಬ : 3.37 ಲಕ್ಷ ರೂಪಾಯಿಯ ದಾಖಲೆ ಮೊತ್ತಕ್ಕೆ ಬಿಡ್ ಆದ ನೂಜಿಬಾಳ್ತಿಲ ಗ್ರಾಮದ ವಾರ್ಷಿಕ ಮೀನು ವಹಿವಾಟು – ಮೀನಿನ ಬೆಲೆಯೇರಿಕೆ ಭೀತಿಯಲ್ಲಿ ಗ್ರಾಮಸ್ಥರ ಲೆಕ್ಕಾಚಾರ ಹೀಗಿದೆ ನೋಡಿ….
ನ್ಯೂಸ್ ಆ್ಯರೋ : ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಂದಿನ ಒಂದು ವರ್ಷಗಳ ಕಾಲ ಹಸಿ ಮೀನು ಮಾರಾಟ ಮಾಡುವ ಸಲುವಾಗಿ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ದಾಖಲೆ ಮೊತ್ತಕ್ಕೆ ಬಿಡ್ ಆಗಿದ್ದು ಸಾರ್ವಜನಿಕರು ಹೌಹಾರುವಂತೆ ಮಾಡಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೀನು ಮಾರಾಟ ಮಾಡಲು ಹಕ್ಕುಸ್ವಾಮ್ಯಕ್ಕಾಗಿ ಬಹಿರಂಗ ಹರಾಜು ಮಾಡುವ ಬಗ್ಗೆ ಕಳೆದ 14ನೇ ತಾರೀಖಿನಂದು ಗ್ರಾಮ ಪಂಚಾಯತ್ ಈ ಬಗ್ಗೆ ಪ್ರಕಟಣೆ ಹೊರಡಿಸಿತ್ತು.
ಕಳೆದ ಬಾರಿ ಒಂದು ವರ್ಷದ ಅವಧಿಗೆ 2.80 ಲಕ್ಷ ಮೊತ್ತಕ್ಕೆ ಬಿಡ್ ಆಗಿದ್ದ ಹಿನ್ನೆಲೆಯಲ್ಲಿ ಇಂದಿನ ಹರಾಜು ಪ್ರಕ್ರಿಯೆ ಕುತೂಹಲ ಮೂಡಿಸಿತ್ತಲ್ಲದೇ 14 ಮಂದಿ ಹರಾಜಿನಲ್ಲಿ ಭಾಗವಹಿಸಲು ಠೇವಣಿ ಇಟ್ಟಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಈ ಮೊದಲೇ ಹಸಿ ಮೀನು ವ್ಯವಹಾರಕ್ಕೆ ಗ್ರಾಮ ಪಂಚಾಯತ್ ನ ಮೌಲ್ಯ 1 ಲಕ್ಷ ಎಂದು ಘೋಷಿಸಲಾಗಿದ್ದ ಕಾರಣ ಒಂದು ಲಕ್ಷದಿಂದ ಆರಂಭವಾದ ಬಿಡ್ಡಿಂಗ್ ಕಳೆದ ಬಾರಿಯ ಬಿಡ್ಡಿಂಗ್ ಮೊತ್ತವನ್ನೂ ಮೀರಿ ಬೆಳೆದು 3.37 ಲಕ್ಷ ಮೊತ್ತಕ್ಕೆ ಮುಹಮ್ಮದ್ ಶರೀಫ್ ಅಲಿಯಾಸ್ ಮಮ್ಮು ಅವರ ಪಾಲಾಗಿದೆ.
ಹರಾಜು ಮುಗಿದ ಬೆನ್ನಲ್ಲೇ ಗ್ರಾಮಸ್ಥರು ವ್ಯವಹಾರ ಲೆಕ್ಕಾಚಾರ ಆರಂಭಿಸಿದ್ದು, ನೂಜಿಬಾಳ್ತಿಲ ವ್ಯಾಪ್ತಿಯಲ್ಲಿ ಮೀನಿನ ದರ ಏರುವ ಬಗ್ಗೆ ಭೀತಿ ವ್ಯಕ್ತಪಡಿಸಿದ್ದಾರೆ. ದಿನವೊಂದಕ್ಕೆ ಸರಾಸರಿ ಒಂದು ಸಾವಿರ ರೂಪಾಯಿ ಗ್ರಾಮ ಪಂಚಾಯತ್ ಗೆ ಕೊಡಬೇಕಾದರೆ ಮೀನಿನ ಬೆಲೆ ಇನ್ನೆಷ್ಟು ಹೆಚ್ಚಾಗಬಹುದೋ ಎಂದು ಪೆಚ್ಚು ಮೋರೆ ಹಾಕಿದ್ದಾರೆ.
ವರ್ಷಕ್ಕೆ 365 ದಿನಗಳಾದರೆ ಅದರ ಪೈಕಿ ವರ್ಷಕ್ಕೆ 52 ಶುಕ್ರವಾರ ಮೀನು ಮಾರಾಟ ಇರೋದಿಲ್ಲ ಅಂದುಕೊಂಡರೂ ಬಾಕಿ ಉಳಿಯೋದು ಕೇವಲ 313 ದಿನ. ಅದರ ಪೈಕಿ 3.37 ಲಕ್ಷ ಹರಾಜಿನ ಮೊತ್ತವನ್ನು 313 ದಿನದೊಂದಿಗೆ ಬಾಗಿಸಿದಾಗ ದಿನವೊಂದಕ್ಕೆ 1076 ಗ್ರಾಮ ಪಂಚಾಯತ್ ಗೆ ಕೊಡೋದಾದರೆ ಮೀನು ಖರೀದಿ ಖರ್ಚು ಸಾಗಾಟ ವಾಹನದ ಖರ್ಚು, ಮಾರಾಟ ಮಾಡುವವರ ಸಂಬಳ ಸೇರಿದಂತೆ ಲಾಭವೂ ಸೇರಿದರೆ ಒಂದು ಕೆಜಿ ಮೀನಿನ ಬೆಲೆಯೆಷ್ಟು ಎಂಬ ಜಾಣ ಲೆಕ್ಕಾಚಾರದಲ್ಲಿ ತೊಡಗಿದ್ದು ಕಲ್ಲುಗುಡ್ಡೆ ವಾಟ್ಸಾಪ್ ಗ್ರೂಪ್ ವೊಂದರಲ್ಲಿ ಕಾಣಿಸಿಕೊಂಡಿದೆ.
ನೂಜಿಬಾಳ್ತಿಲದ ಮೀನು ಮಾರಾಟದ ಹರಾಜು ಮುಗಿಯುತ್ತಿದ್ದಂತೆ “ಈ ಸರ್ತಿ ಮೀನ್ ದ ರೇಟ್ ಡ್ ಕೋರಿಯೇ ತಿನೊಲಿ” ಅಂದವರೆಷ್ಟು ಅಂತ ಇನ್ನೂ ಸರಿಯಾಗಿ ಲೆಕ್ಕ ಸಿಕ್ಕಿಲ್ಲ…!! ಇದನ್ನೆಲ್ಲಾ ಕೇಳಿಸಿಕೊಂಡ ಅಲ್ಲಿಯೇ ಪಕ್ಕದ ಅಂಗಡಿಯ ಕೋಳಿ ವ್ಯಾಪಾರಿಯೊಬ್ಬರು ಮೀಸೆ ಕೆಳಗೆಯೇ ನಗಾಡಿದ್ದು ಮಾತ್ರ ಯಾರಿಗೂ ಕಾಣಿಸಿಲ್ವಂತೆ..!
Leave a Comment