
ಸನಾತನ ಧರ್ಮವನ್ನು ಡೆಂಗ್ಯೂಗೆ ಹೋಲಿಸಿದ ಸ್ಟಾಲಿನ್ ಪುತ್ರ – ದೇಶಾದ್ಯಂತ ಹಿಂದೂಗಳಿಂದ ವ್ಯಾಪಕ ಆಕ್ರೋಶ
- ಕೌತುಕ-ವಿಜ್ಞಾನ
- September 3, 2023
- No Comment
- 45
ನ್ಯೂಸ್ ಆ್ಯರೋ : ತಮಿಳುನಾಡು ಸಚಿವ, ನಟ, ನಿರ್ಮಾಪಕ ಉದಯನಿಧಿ ಸ್ಟಾಲಿನ್ ಸನಾತನದ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಉದಯನಿಧಿ ಸ್ಟಾಲಿನ್ ಹೇಳಿದ್ದೇನು?
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ, ವಿಶೇಷ ಕಾಯ್ದೆ ಅನುಷ್ಠಾನ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೆಪ್ಟೆಂಬರ್ 2ರಂದು ನಡೆದ ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿ, ಕೇವಲ ಸನಾತನ ಧರ್ಮವನ್ನು ವಿರೋಧಿಸಿದರೆ ಸಾಲದು, ಅದನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯೂ, ಮಲೇರಿಯಾ, ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಅದನ್ನು ತೊಡೆದು ಹಾಕಬೇಕು. ಹಾಗೆಯೇ ಸನಾತನ ಸಂಸ್ಥೆಯನ್ನು ವಿರೋಧಿಸಿ ಅದನ್ನು ನಾಶ ಮಾಡಬೇಕು ಎಂದು ಹೇಳಿದರು.
ಸನಾತನ ಎನ್ನುವ ಪದ ಸಂಸ್ಕೃತದಿಂದ ಬಂದಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರೋಧಿಯಾಗಿದೆ ಎಂದು ಅಭಿಪ್ರಾಯಪಟ್ಟರು. ನಾವು ಪೆರಿಯಾರ್, ಅಣ್ಣಾ ಮತ್ತು ಕರುಣಾನಿಧಿಯವರ ಬೆಂಬಲಿಗರು. ಸಾಮಾಜಿಕ ನ್ಯಾಯಕ್ಕಾಗಿ ಯಾವಾಗಲೂ ಹೋರಾಟ ಮುಂದುವರಿಸುತ್ತೇವೆ. ಯಾರಿಗೂ ಭಯ ಪಡುವುದಿಲ್ಲ ಎಂದರು.
ಬಿಜೆಪಿ ವಿರೋಧ
ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಸಚಿವರ ವಿರುದ್ಧ ಬಿಜೆಪಿ ಹಾರಿ ಹಾಯ್ದಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಎಕ್ಸ್ (ಟ್ವೀಟರ್) ನಲ್ಲಿ, ಸನಾತನವನ್ನು ಹಿಂಬಾಲಿಸುವ ಶೇ. 80ರಷ್ಟು ಜನ ಸಂಖ್ಯೆಯ ನರಮೇಧಕ್ಕೆ ಸಚಿವರು ಕರೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೆ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯಿಸಿ, ನಾನು ಎಲ್ಲೂ ಸನಾತನವನ್ನು ಹಿಂಬಾಲಿಸುವವರ ನರಮೇಧಕ್ಕೆ ಕರೆ ನೀಡಿಲ್ಲ. ನನ್ನ ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಸವಾಲುಗಳನ್ನು ಎದುರಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಇತ್ತೀಚೆಗೆ ತೆರೆಕಂಡ ಉದಯನಿಧಿ ಸ್ಟಾಲಿನ್ ಅಭಿನಯದ ‘ಮಾಮಣ್ಣಾನ್’ ಚಿತ್ರ ಕೂಡ ಜಾತಿ ವ್ಯವಸ್ಥೆಯ ಬಗ್ಗೆ ಸೂಕ್ಷ್ಮವಾಗಿ ಬೆಳಕು ಚೆಲ್ಲಿತ್ತು. ವಡಿವೇಲು, ಫಹಾದ್ ಫಾಸಿಲ್, ಕೀರ್ತಿ ಸುರೇಶ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ಈ ಚಿತ್ರವನ್ನು ಸ್ವತಃ ಉದಯನಿಧಿ ಸ್ಟಾಲಿನ್ ನಿರ್ಮಿಸಿದ್ದರು.