
ಎರಡು ವರ್ಷಗಳ ಬಳಿಕ ಮುಖವಾಡ ಕಳಚಿದ ನಟಿ ಶಿಲ್ಪಾ ಶೆಟ್ಟಿ ಪತಿ – ಮಾಸ್ಕ್ ಧರಿಸಿದ್ದೇಕೆಂದು ಬಾಯಿಬಿಟ್ಟ ರಾಜ್ ಕುಂದ್ರಾ ಹೇಳಿದ್ದೇನು..?
- ಮನರಂಜನೆ
- October 19, 2023
- No Comment
- 167
ನ್ಯೂಸ್ ಆ್ಯರೋ : ಕಳೆದ ಎರಡು ವರ್ಷಗಳಿಂದ ಮಾಸ್ಕ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ಕೊನೆಗೂ ಮಾಸ್ಕ್ ಇಲ್ಲದೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.
‘UT 69’ ಟ್ರೇಲರ್ ರಿಲೀಸ್ ಕಾರ್ಯಕ್ರಮ ಬುಧವಾರ ಮುಂಬೈನಲ್ಲಿ ನಡೆದಿದೆ. ಈ ಸಮಯದಲ್ಲಿ ರಾಜ್ ಕುಂದ್ರಾ ಅವರು ವೇದಿಕೆ ಮೇಲೆ ತಮ್ಮ ಮುಖವಾಡವನ್ನು ತೆಗೆದಿದ್ದಾರೆ.
ಎರಡು ವರ್ಷದ ಹಿಂದೆ ಉದ್ಯಮಿ ರಾಜ್ ಕುಂದ್ರಾ ಅವರು ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣ ಸಂಬಂಧ ಬಂಧಿಯಾಗಿದ್ದರು. ಬೇಲ್ ಮೂಲಕ ಹೊರಬಂದ ರಾಜ್ ಅವರು ಆ ನಂತರದ ದಿನಗಳಲ್ಲಿ ಸಾಮಾಜಿಕವಾಗಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುತ್ತಿದ್ದರು. ಇದೀಗ ಕೊನೆಗೂ ಬಹಳ ದಿನಗಳ ನಂತರ ಅವರು ಮಾಸ್ಕ್ ತೆಗೆದು ಮುಖ ತೋರಿಸಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣದಡಿ ಜೈಲು ಸೇರಿದ್ದ ರಾಜ್ ಕುಂದ್ರಾ
ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಅದನ್ನು ವಿವಿಧ ಆ್ಯಪ್‌ಗಳ ಮೂಲಕ ವಿತರಣೆ ಮಾಡುತ್ತಿದ್ದ ಆರೋಪದ ಮೇರೆಗೆ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು 2021 ಜುಲೈನಲ್ಲಿ ಬಂಧಿಸಿದ್ದರು. ಅದೇ ಸಮಯಕ್ಕೆ ಶೆರ್ಲಿನ್ ಛೋಪ್ರಾ ಸೇರಿದಂತೆ ಕೆಲವು ಮಾಡೆಲ್‌ಗಳು ರಾಜ್ ಕುಂದ್ರಾ ವಿರುದ್ಧ ದೂರು ನೀಡಿದ್ದರು.
ರಾಜ್ ಕುಂದ್ರಾ ನನ್ನನ್ನು ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಶೆರ್ಲಿನ್ ಆರೋಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೂನಂ ಪಾಂಡೆಯನ್ನು ಕೂಡಾ ವಿಚಾರಣೆ ಮಾಡಲಾಗಿತ್ತು. ಆದರೆ ನಾನು ಮಾಡಿರುವುದು ಅಶ್ಲೀಲ ವಿಡಿಯೋಗಳಲ್ಲ, ಅವು ಬೋಲ್ಡ್ ವಿಡಿಯೋಗಳು ಎಂದು ರಾಜ್ ಕುಂದ್ರಾ ವಾದಿಸಿದ್ದರು.
2 ವರ್ಷಗಳಿಂದ ಮಾಸ್ಕ್ ಧರಿಸುತ್ತಿದ್ದ ರಾಜ್ ಕುಂದ್ರಾ
ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯ ರಾಜ್ ಕುಂದ್ರಾಗೆ ಜಾಮೀನು ನೀಡಿ ರಿಲೀಸ್ ಮಾಡಿತ್ತು. ಆ ಬಳಿಕ ರಾಜ್ ಅವರು ಮುಖ ತುಂಬಾ ಹೆಲ್ಮೆಟ್ ರೀತಿಯಲ್ಲಿ ಮಾಸ್ಕ್ ಅನ್ನು ಧರಿಸುತ್ತಿದ್ದಾರೆ. ಇತ್ತೀಚೆಗೆ ಗಣೇಶ ಹಬ್ಬದ ಸಂದರ್ಭದಲ್ಲಿ ಕೂಡಾ ರಾಜ್ ಕುಂದ್ರಾ ಮಾಸ್ಕ್ ಧರಿಸಿದ್ದರು. ”ನಾನು ಯಾವ ತಪ್ಪು ಮಾಡಿಲ್ಲ. ಸಾರ್ವಜನಿಕರು, ಸ್ನೇಹಿತರು ನನ್ನನ್ನು ನೋಡುತ್ತಾರೆ ಎಂಬ ಕಾರಣಕ್ಕೆ ಮಾಸ್ಕ್ ಧರಿಸುತ್ತಿಲ್ಲ. ಮೀಡಿಯಾದವರಿಂದ ನನಗೆ ಬಹಳ ನೋವಾಗಿದೆ. ಆದ ಕಾರಣ ಅವರು ನನ್ನ ಫೋಟೋ ಕ್ಲಿಕ್ ಮಾಡಬಾರದು, ನನ್ನ ವಿಡಿಯೋ ರೆಕಾರ್ಡ್ ಮಾಡಬಾರದು ಎಂಬ ಕಾರಣಕ್ಕೆ ಮಾಸ್ಕ್ ಧರಿಸುತ್ತಿದ್ದೇನೆ” ಎಂದು ನೆಟಿಜನ್ಸ್ ಪ್ರಶ್ನೆಗೆ ರಾಜ್ ಕುಂದ್ರಾ ಉತ್ತರಿಸಿದ್ದರು. ಇದೀಗ ಅವರ ಸಿನಿಮಾದ ಟ್ರೇಲರ್ ರಿಲೀಸ್ ವೇಳೆ ಮಾಸ್ಕ್ ಅನ್ನು ತೆಗೆದಿದ್ದಾರೆ.