
ಬಿಗ್ ಬಾಸ್ ಕನ್ನಡ ಸೀಸನ್ 10 ಶೀಘ್ರ ಆರಂಭ – ‘ಸಂಥಿಂಗ್ ಸ್ಪೆಶಲ್’ ಪ್ರೋಮೋ ಬಿಡುಗಡೆ
- ಮನರಂಜನೆ
- September 3, 2023
- No Comment
- 56
ನ್ಯೂಸ್ ಆ್ಯರೋ : ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್. ಆರಂಭದಲ್ಲಿ ಹಿಂದಿಯಲ್ಲಿ ಕಾಣಿಸಿಕೊಂಡಿದ್ದ ಈ ಶೋ ಬಳಿಕ ಕನ್ನಡಕ್ಕೂ ಕಾಲಿಟ್ಟು ಪ್ರೇಕ್ಷಕರ ಗಮನ ಸೆಳೆದಿದೆ. ಯಶಸ್ವಿಯಾಗಿ 9 ಸೀಸನ್ ಮುಗಿಸಿರುವ ಬಿಗ್ ಬಾಸ್ ಕನ್ನಡ ಇದೀಗ 10ನೇ ಸೀಸನ್ ಗೆ ತಯಾರಾಗಿದೆ. ನಟ ಕಿಚ್ಚ ಸುದೀಪ್ ನಿರೂಪಣೆ ಈ ಶೋದ ಪ್ರಮುಖ ಆಕರ್ಷಣೆ.
ಪ್ರೋಮೋ ಬಿಡುಗಡೆ
ಪ್ರೇಕ್ಷಕರು ಹಲವು ದಿನಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕಾಗಿ ಕಾಯುತ್ತಿದ್ದರು. ಶೀಘ್ರ ಆರಂಭವಾಗಲಿದೆ ಎಂದಿರುವ ಕಲರ್ಸ್ ಕನ್ನಡ ವಾಹಿನಿ ದಿನಾಂಕವನ್ನು ತಿಳಿಸಿಲ್ಲ. ಸದ್ಯ ಮೊದಲ ಪ್ರೋಮೋ ಬಿಡುಗಡೆ ಮಾಡಿ ವೀಕ್ಷಕರ ಕುತೂಹಲ ಕೆರಳಿಸಿದೆ.
ಸಮ್ ಥಿಂಗ್ ಸ್ಪೆಶಲ್
ಈ ಸೀಸನ್ ಬಹಳ ವಿಶೇಷವಾಗಿರಲಿದೆ ಎನ್ನುವುದಕ್ಕೆ ಪ್ರೋಮೋದಲ್ಲಿಯೇ ಸೂಚನೆ ಸಿಕ್ಕಿದೆ. ಈ ಬಾರಿ ಸಮ್ ಥಿಂಗ್ ಸ್ಪೆಶಲ್ ಇರಲಿದೆ ಎಂದು ಬಿಗ್ ಬಾಸ್ ಹಿನ್ನೆಲೆ ಧ್ವನಿ ಹೇಳಿರುವುದು ನಿರೀಕ್ಷೆ ಮತ್ತು ಕುತೂಹಲವನ್ನು ಹೆಚ್ಚಿಸಿದೆ. ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಈ ಪ್ರೋಮೋ ಸೆ. 2ರಂದು ಬಿಡುಗಡೆಯಾಗಿತ್ತು.
ಅಚ್ಚರಿ ಎಂದರೆ ಬಿಗ್ ಬಾಸ್ ನ 9 ಸೀಸನ್ ಗಳ ಹೊಣೆಯನ್ನು ವಾಹಿನಿ ಹೆಡ್ ಆಗಿದ್ದ ಪರಮೇಶ್ವರ್ ಗುಂಡ್ಕಲ್ ಹೊತ್ತಿದ್ದರು. ಆದರೆ ಈ ಬಾರಿ ಅವರ ಅನುಪಸ್ಥಿತಿಯಲ್ಲಿ ಶೋ ಆರಂಭವಾಗಲಿದೆ ಎನ್ನಲಾಗಿದೆ.
ಸೆಪ್ಟಂಬರ್ 24ರಂದು ಆರಂಭವಾಗುತ್ತಾ?
9ನೇ ಸೀಸನ್ ನ ಬಿಗ್ ಬಾಸ್ ಸೆಪ್ಟಂಬರ್ 24ರಂದು ಆರಂಭವಾಗಿತ್ತು. ಹೀಗಾಗಿ ಈ ಬಾರಿಯೂ ಅದೇ ದಿನಾಂಕದಂದು ಪ್ರಸಾರ ಆರಂಭಿಸಲಿದ್ಯಾ? ಎನ್ನುವ ಚರ್ಚೆ ನಡೆಯುತ್ತಿದೆ. ಜೊತೆಗೆ ಈ ಬಾರಿ ಯಾರೆಲ್ಲ ಸ್ಪರ್ಧಿಸಲಿದ್ದಾರೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆ. ಶೀಘ್ರದಲ್ಲೇ ವಾಹಿನಿ ಎಲ್ಲಾ ಸಂಶಯಗಳಿಗೆ ಉತ್ತರ ನೀಡಲಿದೆ.