
ಚಂದನವನದಲ್ಲಿ ಹಲವರ ಮೈಪರಚುತ್ತಿದೆ ಹುಲಿ ಉಗುರು – ವರ್ತೂರ್ ಸಂತೋಷ್ ಬಂಧನ ಬೆನ್ನಲ್ಲೇ ನಟ ದರ್ಶನ್, ಜಗ್ಗೇಶ್, ಶಾಸಕ ಮುನಿರತ್ನಗೆ ಸಂಕಷ್ಟ
- ಮನರಂಜನೆ
- October 25, 2023
- No Comment
- 199
ನ್ಯೂಸ್ ಆ್ಯರೋ : ಹುಲಿ ಉಗುರಿನ ಲಾಕೆಟ್ ಧರಿಸಿದ ಪ್ರಕರಣದಲ್ಲಿ ಬಿಗ್‌ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನದ ಬೆನ್ನಲ್ಲೇ ನಟ ದರ್ಶನ್ ತೂಗುದೀಪ್, ಜಗ್ಗೇಶ್, ಶಾಸಕ ಮುನಿರತ್ನ ಅವರಿಗೆ ಸಂಕಷ್ಟ ಎದುರಾಗಿದೆ.
ಇನ್ನೂ ವರ್ತೂರ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದ ಹಾಗೇ ಇದೇ ರೀತಿಯ ಲಾಕೆಟ್ ಅನ್ನು ಧರಿಸಿರುವ ನಟ ದರ್ಶನ್, ಜಗ್ಗೇಶ್ ಹಾಗೂ ಶಾಸಕ ಮುನಿರತ್ನ ಅವರಿಗೆ ಬಂಧನ ಭೀತಿ ಎದುರಾಗಿದೆ. ವರ್ತೂರು ಸಂತೋಷ್ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮೊದಲು ಚರ್ಚೆಗೆ ಬಂದಿದ್ದೇ ನಟ ದರ್ಶನ್ ಹೆಸರು.
ಇನ್ನೂ ದರ್ಶನ್ ಅವರು ಲಾಕೆಟ್ ಧರಿಸಿರುವ ಫೋಟೋಗಳು ಹಾಗೂ ಜಗ್ಗೇಶ್ ಅವರು ಸ್ವತಃ ಹುಲಿ ಉಗುರಿನ ಲಾಕೆಟ್ ಅನ್ನು ಅಮ್ಮ ನೀಡಿದ್ದಾಗಿ ಹೇಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನೂ ದರ್ಶನ್ ಅವರು ಅರಣ್ಯ ಇಲಾಖೆ ರಾಯಭಾರಿಯಾಗಿದ್ದವರು. ಹೀಗಾಗಿ ಅವರ ಮನೆಯನ್ನು ಚೆಕ್ ಮಾಡಬೇಕು. ಅವರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಂದು ಹೆಜ್ಜೆ ಮುಂದೇ ಹೋಗಿರೋ ಕೆಲ ಸಂಘಟನೆಯ ಕಾರ್ಯಕರ್ತರು ದೂರು ಕೂಡ ನೀಡಿದ್ದಾರೆ. ಇದರ ಮಧ್ಯೆ ನವರಸ ನಾಯಕ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾಧ್ಯಮ ವೊಂದಕ್ಕೆ ನೀಡಿದ ಸಂದರ್ಶನ ಈಗ ತೀವ್ರ ಚರ್ಚೆಗೆ ಗುರಿಯಾಗಿದೆ.
ಜಗ್ಗೇಶ್ ನೀಡಿದ ಸಂದರ್ಶನದಲ್ಲಿ ಏನು ಹೇಳಿದ್ದಾರೆ ಗೊತ್ತಾ?
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜಗ್ಗೇಶ್, ನಾನು ಹುಲಿಯಂತೆ ಬಾಳಬೇಕು ಎಂಬ ಕಾರಣಕ್ಕೆ ನನ್ನ ತಾಯಿ ನನಗೆ ಒರಿಜನಲ್ ಹುಲಿ ಉಗುರು ಕಟ್ಟಿಸಿ ಕೊಟ್ಟಿದ್ದರು. ಇದು ನನ್ನ ಕತ್ತಿನಲ್ಲಿರೋದು ಒರಿಜನಲ್ ಹುಲಿ ಉಗುರು ಎಂದು ತೋರಿಸಿದ್ದಾರೆ. ಈ ವೀಡಿಯೋ ಈಗ ಸಖತ್ ವೈರಲ್ ಆಗಿದ್ದು, ಹಾಗಿದ್ದರೆ ನಟ ಜಗ್ಗೇಶ್ ಕೂಡ ಕಾನೂನು ಕ್ರಮ ಎದುರಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಇದಲ್ಲದೇ ನಿರ್ಮಾಪಕ ಮುನಿರತ್ನ ಹುಲಿ ಉಗುರು ಧರಿಸಿದ ಪೋಟೋ ಕೂಡ ವೈರಲ್ ಆಗಿದ್ದು ಮಾಜಿ ಸಚಿವರೂ ಕಾನೂನು ಕ್ರಮ ಎದುರಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂಬ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಕೃಷಿ ಹಾಗೂ ಪ್ರಾಣಿ ಪ್ರಿಯರಾಗಿರುವ ವರ್ತೂರ್ ಸಂತೋಷ್ ಹುಲಿ ಉಗುರು ಧರಿಸಿದ್ದಕ್ಕೆ ಶಿಕ್ಷೆಯಾದರೆ ಜಗ್ಗೇಶ್, ದರ್ಶನ್ ಹಾಗೂ ಮುನಿರತ್ನ, ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರ ಮೇಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ ನೆಟ್ಟಿಗರು.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಟ್ಯಾಗ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ. ದರ್ಶನ್ ಅಥವಾ ಜಗ್ಗೇಶ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಚರ್ಚೆ ಅರಂಭವಾಗಿದೆ.
ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮೇಲೆ ಒತ್ತಡ ಸೃಷ್ಟಿಯಾಗಿದ್ದು, ವರ್ತೂರು ಸಂತೋಷ್ ಮೇಲೆ ಕ್ರಮ ಕೈಗೊಂಡಷ್ಟೇ ಸುಲಭವಾಗಿ ದರ್ಶನ್ ಹಾಗೂ ಜಗ್ಗೇಶ್ ಮೇಲೆ ಕ್ರಮವಾಗುತ್ತಾ ಕಾದು ನೋಡಬೇಕಿದೆ.