ದುರಂತ ಅಂತ್ಯ ಕಂಡ 2 ವರ್ಷದ ಕಂದಮ್ಮ; ಕಾರಣ ಕೇಳಿದ್ರೆ ಕರುಳು ಚುರ್ ಅನ್ನುತ್ತೆ
ನ್ಯೂಸ್ ಆ್ಯರೋ: ಕಳೆದ ವಾರ ಮೈ ಮೇಲೆ ಟೀ ಚೆಲ್ಲಿಕೊಂಡು ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಿರೀಮನೆ ಗ್ರಾಮದ ರಾಜೇಶ್ ಹಾಗೂ ಅಶ್ವಿನಿ ದಂಪತಿ ಪುತ್ರ ಅಥರ್ವ (2) ಮೃತ ಬಾಲಕ.
ರಾಜೇಶ್ ಅವರ ನೆರೆಮನೆ ನಿವಾಸಿ ಕಳೆದ ವಾರ ಮೃತಪಟ್ಟಿದ್ದರು. ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಂಬಂಧಿಕರಿಗೆ ಅಶ್ವಿನಿ ಟೀ ಮಾಡಿಟ್ಟಿದ್ದರು. ಟೀ ಇರುವ ಪಾತ್ರೆಯನ್ನು ಮಗು ತನ್ನ ಮೈಮೇಲೆ ಬೀಳಿಸಿಕೊಂಡು ಗಾಯವಾಗಿತ್ತು. ಕಳೆದೊಂದು ವಾರದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜೇಶ್ ಅವರ ನೆರೆಮನೆಯ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅಂದು ರಾತ್ರಿ ಅಂತಿಮ ದರ್ಶನಕ್ಕೆ ಬಂದಿದ್ದ ಜನರಿಗೆಂದು ರಾಜೇಶ್ ಮತ್ತವರ ಪತ್ನಿ ದೊಡ್ಡ ಪಾತ್ರೆಯಲ್ಲಿ ಟೀ ಮಾಡಿ ತಮ್ಮ ಮನೆಯ ಜಗಲಿ ಮೇಲಿಟ್ಟಿದ್ದರು. ಆಟವಾಡುತ್ತಾ ಅಲ್ಲಿಗೆ ಬಂದಿದ್ದ ಬಾಲಕ ಅಥರ್ವ, ಪಾತ್ರೆಯನ್ನು ಎಳೆದಿದ್ದಾನೆ. ತುಂಬಾ ಬಿಸಿ ಇದ್ದ ಟೀ ಮೈಮೇಲೆ ಚೆಲ್ಲಿ ಗಾಯಗೊಂಡಿದ್ದ.
ರಾಜೇಶ್, ಅಶ್ವಿನಿ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದ್ದು ಇದೀಗ ಪುತ್ರನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಹಿರಿಮನೆ ಗ್ರಾಮದಲ್ಲಿ ಮೌನ ಆವರಿಸಿದೆ.
Leave a Comment