ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಕೇಸ್ ಗೆ ಬಿತ್ತಾ ಅಂತಿಮ ಮುದ್ರೆ? – ಮರುತನಿಖೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ನ್ಯೂಸ್ ಆ್ಯರೋ : ಧರ್ಮಸ್ಥಳ ಸಮೀಪದ ಪಾಂಗಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಕೇಸ್ ಸಂಬಂಧದ ಮರು ತನಿಖೆಯ ಅರ್ಜಿಯನ್ನು ವಜಾಗೊಳಿಸಿ ಇಂದು ಹೈಕೋರ್ಟ್ ನ ವಿಭಾಗೀಯ ಪೀಠ ಆದೇಶ ನೀಡಿದೆ.
ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾ.ಜೆ.ಎಂ ಖಾಜಿ ಅವರ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದ್ದು, ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣದ ಮರು ತನಿಖೆ ಕೋರಿಕೆ ಮತ್ತು ಸಿಬಿಐ ವಿಶೇಷ ಮಕ್ಕಳ ನ್ಯಾಯಾಲಯದ ಆದೇಶ ಬದಿಗೆ ಸರಿಸುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಆದೇಶ ಪ್ರಕಟಿಸಿದೆ.
ಸಿಬಿಐ ಮೇಲ್ಮನವಿ ಮತ್ತು ಮೃತ ಸೌಜನ್ಯ ತಂದೆ ಚಂದಪ್ಪ ಗೌಡ ಸಲ್ಲಿಸಿದ್ದ ಅರ್ಜಿಗಳು ಹಾಗೂ ಪರಿಹಾರ ಕೋರಿ ಆರೋಪಿ ಸಂತೋಷ್ ರಾವ್ ಸಲ್ಲಿಸಿದ್ದ ಎಲ್ಲಾ 3 ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿ ತೀರ್ಪು ನೀಡಿದೆ. ಇದಲ್ಲದೇ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಂತೋಷ್ ರಾವ್ ಖುಲಾಸೆಗೊಳಿಸಿದ್ದ ಸೆಷನ್ಸ್ ಕೋರ್ಟ್ನ ಆದೇಶವನ್ನೂ ಹೈಕೋರ್ಟ್ ಇಂದು ಎತ್ತಿಹಿಡಿದು ತೀರ್ಪಿತ್ತಿದೆ.
ಪ್ರಕರಣದ ಹಿನ್ನೆಲೆ :
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ SDM ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅವರ ಕೊಲೆ ಮತ್ತು ಅತ್ಯಾಚಾರ 2012ರಲ್ಲಿ ನಡೆದಿತ್ತು. ಪ್ರಕರಣವನ್ನು ಮೊದಲಿಗೆ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿ, ನಂತರ ಸಿಐಡಿಗೆ ವಹಿಸಲಾಗಿತ್ತು. ನ.6ರಂದು (2013) ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸಿ ಆದೇಶ ನೀಡಿತ್ತು. ತನಿಖಾಧಿಕಾರಿಗಳು ಕಾರ್ಕಳ ಮೂಲದ ಸಂತೋಷ್ ರಾವ್ ಎಂಬಾತನನ್ನು ಆರೋಪಿಯಾಗಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಭಾರೀ ಪ್ರತಿಭಟನೆ ನಡೆದಿತ್ತು.
Leave a Comment