ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಗಳನ್ನು ಬಿಸಿಲಲ್ಲಿ ಕೂರಿಸಿದ ಸ್ಕೂಲ್ ಮ್ಯಾನೇಜರ್: ವಿಡಿಯೋ ವೈರಲ್
ಉತ್ತರ ಪ್ರದೇಶ: ಇಲ್ಲೊಂದು ಖಾಸಗಿ ಶಾಲೆಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ಸಮಯಕ್ಕೆ ಸರಿಯಾಗಿ ಪೋಷಕರು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸ್ಕೂಲ್ ಮ್ಯಾನೇಜರ್ ಒಬ್ಬ ವಿದ್ಯಾರ್ಥಿಗಳನ್ನು ಶಾಲೆಯ ಗೇಟ್‌ನಿಂದ ಹೊರ ಹಾಕಿ ಬಿಸಿಲಲ್ಲಿ ಕೂರಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸ್ಕೂಲ್ ಮ್ಯಾನೇಜರ್ ಸುಮಾರು 100 ಮುಗ್ಧ ವಿದ್ಯಾರ್ಥಿಗಳನ್ನು ಗೇಟ್ ಒಳಗೆ ಬರಲು ಬಿಡದೆ ಬಿಸಿಲಲ್ಲಿ ಕೂರಿಸಿದ್ದಾನೆ. ಅಷ್ಟೇ ಅಲ್ಲದೆ ವಿಡಿಯೋ ಮಾಡುವ ಮೂಲಕ ಶುಲ್ಕ ಕಟ್ಟುವಂತೆ ಒತ್ತಡ ಹೇರಿ ಮಕ್ಕಳಿಗೆ ಅವಮಾನವನ್ನೂ ಮಾಡಿದ್ದಾನೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಮ್ಯಾನೇಜರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಸದ್ಯ ಈ ಬಗ್ಗೆ ಶಾಲಾ ನಿರೀಕ್ಷಕರು ತನಿಖೆಗೆ ಆದೇಶಿಸಿದ್ದಾರೆ.
Info_4Education ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಕ್ಕಳು ಶಾಲೆಗೆ ಗೇಟ್ ಹೊರಗಡೆ ಬಿಸಿಲಿನಲ್ಲಿ ತಲೆ ತಗ್ಗಿಸಿ ಕುಳಿತಿರುವಂತಹ ದೃಶ್ಯವನ್ನು ಕಾಣಬಹುದು. ಶುಲ್ಕವನ್ನು ಕಟ್ಟುವವರೆಗೆ ನಿಮ್ಮ ಮಕ್ಕಳನ್ನು ಶಾಲೆಯ ಗೇಟ್ ಒಳಗೆ ಬಿಡುವುದಿಲ್ಲ ಎಂದು ಪೋಷಕರಿಗೆ ಈಗಾಗಲೇ ತಿಳಿಸಲಾಗಿದೆ, ಆದ್ರೆ ಅವರು ಇನ್ನೂ ಫೀಸ್ ಕಟ್ಟಿಲ್ಲ ಅದಕ್ಕಾಗಿ ಇವರನ್ನೆಲ್ಲಾ ಹೊರ ಹಾಕಿದ್ದೇನೆ ಎಂದು ಮ್ಯಾನೇಜರ್ ವಿಡಿಯೋ ಮಾಡುತ್ತಾ ದರ್ಪದ ಮಾತುಗಳನ್ನಾಡಿದ್ದಾನೆ.
Leave a Comment