
ಮನೆಯಿಂದ ಹೊರಗಳೆದು ಮಕ್ಕಳೆದುರೇ ತಾಯಿಗೆ ಥಳಿಸಿದ ದುಷ್ಕರ್ಮಿಗಳು – ಅಮಾನವೀಯ ದೃಶ್ಯ ಕಂಡು ಅತ್ತ ಪುಟ್ಟ ಮಗು, ವಿಡಿಯೋ ವೈರಲ್..!
- ವೈರಲ್ ನ್ಯೂಸ್
- September 8, 2023
- No Comment
- 83
ನ್ಯೂಸ್ ಆ್ಯರೋ : ಪುರುಷರ ಗೊಂಪೊಂದು ಮಹಿಳೆಯನ್ನು ಮನೆಯಿಂದ ಹೊರಗೆಳೆದು ಮಕ್ಕಳ ಮುಂದೆಯೇ ಥಳಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಟುವಾ ಜಿಲ್ಲೆಯಲ್ಲಿ ನಡೆದಿದೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಘಟನೆಗೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವಾರ ಕಟುವಾದ ದೇವಲ್ ಗ್ರಾಮದಲ್ಲಿ ನಡೆದ ಈ ಘಟನೆ ಬಗ್ಗೆ ಸೋಮವಾರ ದೂರು ದಾಖಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಪುರುಷರು ಸೇರಿ ಮಹಿಳೆಯನ್ನು ಆಕೆಯ ಮಕ್ಕಳೆದುರೇ ಕೂದಲಲ್ಲಿ ಹಿಡಿದು ಮನೆಯಿಂದ ಹೊರಗೆಳೆದುಕೊಂಡು ಬಂದು ಥಳಿಸಿದ್ದಾರೆ. ಅಮ್ಮನಿಗೆ ಹೊಡೆಯುತ್ತಿರುವುದನ್ನು ನೋಡಿ ಮಗು ಅಳುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಕ್ರಿಮಿನಲ್ ಉದ್ದೇಶದಿಂದ ನಾಲ್ವರು ತನ್ನ ಮನೆಗೆ ನುಗ್ಗಿ ತನ್ನ ಮೇಲೆ ಹಲ್ಲೆ ನಡೆಸಿ ನಿಂದಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಕಾಕು ರಾಮ್, ಬಲ್ಲು ರಾಮ್, ಹ್ಯಾಪಿ ಮತ್ತು ಬಂಟಿ ಎಂಬ ನಾಲ್ವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಗ್ರಾಮದ ಹೊರಗಿನ ವ್ಯಕ್ತಿಗಳಿಗೆ ಮಹಿಳೆ ತನ್ನ ಮನೆಗೆ ಬರಲು ಅವಕಾಶ ನೀಡುತ್ತಿದ್ದುದರಿಂದ ಗ್ರಾಮಸ್ಥರು ಮಹಿಳೆಯನ್ನು ವಿರೋಧಿಸಿದ್ದರು. ಆ ಗ್ರಾಮಕ್ಕೆ ಭೇಟಿ ನೀಡದಂತೆ ಹೊರಗಿನ ವ್ಯಕ್ತಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರೂ ಅವರು ಆಕೆಯ ಮನೆಗೆ ಬಂದಿದ್ದರಿಂದ ಆಕೆಯನ್ನು ಥಳಿಸಲಾಗಿದೆ ಎನ್ನಲಾಗಿದೆ.