
ನಾನು ಧರಿಸಿದ್ದು ಕೃತಕ ಹುಲಿ ಉಗುರಿನ ಪೆಂಡೆಂಟ್ : ವೈರಲ್ ಬೆನ್ನಲ್ಲೇ ಸ್ಪಷ್ಟನೆ ನೀಡಿದ ನಿಖಿಲ್ ಕುಮಾರಸ್ವಾಮಿ – ವಿನಯ್ ಗುರೂಜಿ ಹುಲಿ ಚರ್ಮದ ಹಿನ್ನೆಲೆಯೂ ಬಹಿರಂಗ..!!
- ಕರ್ನಾಟಕ
- October 25, 2023
- No Comment
- 74
ನ್ಯೂಸ್ ಆ್ಯರೋ : ನಾನು ಧರಿಸಿದ್ದು ಕೃತಕ ಹುಲಿ ಉಗುರಿನ ಪೆಂಡೆಂಟ್. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವಿಚಾರಣೆ ನಡೆಸಬಹುದು. ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಹುಲಿ ಉಗುರಿನ ಲಾಕೆಟ್ ಧರಿಸಿದ ಸಂಬಂಧ ಬಿಗ್‌ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನ ಬೆನ್ನಲ್ಲೇ ಸ್ಯಾಂಡಲ್‌ವುಡ್ ನ ನಟರ ಹಾಗೂ ರಾಜಕಾರಣಿಗಳ ಹೆಸರು ಮುನ್ನೆಲೆಗೆ ಬರುತ್ತಿದೆ. ಇನ್ನೂ ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ಜಗ್ಗೇಶ್, ಶಾಸಕ ಮುನಿರತ್ನ ಅವರು ಕೂಡಾ ಹುಲಿ ಉಗುರಿನ ಲಾಕೆಟ್ ಅನ್ನು ಧರಿಸಿರುವ ಫೋಟೋ ಹಾಗೂ ವಿಡಿಯೋಗಳನ್ನು ವೈರಲ್ ಮಾಡಿ ಇವರ ಮೇಲೆ ಯಾಕಿಲ್ಲ ಕ್ರಮ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ನಟ, ಯುವರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ ಅವರು ಕೂಡ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ಎನ್ನಲಾದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಇನ್ನೂ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಹಾಗೇ ಈ ಬಗ್ಗೆ ಸ್ಪಷ್ಟಣೆ ನೀಡಿದ್ದಾರೆ.
‘ನನ್ನ ಮದುವೆ ಸಮಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಇದು ಸತ್ಯಕ್ಕೆ ದೂರ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತಾ ಅರಿವಿದೆ. ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಅದಲ್ಲದೆ ಈ ಪ್ರಕರಣ ಸಂಬಂಧ ವಿನಯ್ ಗುರೂಜಿ ಅವರು ಮತ್ತೇ ಸುದ್ದಿಯಲ್ಲಿದ್ದಾರೆ. 4 ಹುಲಿ ಚರ್ಮದ ಮೇಲೆ ವಿನಯ್ ಗುರೂಜಿ ಕುಳಿತಿರುವ ಫೋಟೋವನ್ನು ವೈರಲ್ ಮಾಡಲಾಗಿದೆ.
ಹುಲಿ ಚರ್ಮವನ್ನು ಈಗಾಗಲೇ ಹಿಂತಿರುಗಿಸಲಾಗಿದೆ
2 ವರ್ಷದ ಹಿಂದೆ ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಎಂಬವರು ವಿನಯ್ ಗುರೂಜಿಗೆ ಉಡುಗೊರೆ ನೀಡಿದ್ದರು. ಕಿರೀಟಿಯವರು ಅರಣ್ಯ ಅಧಿಕಾರಿಗಳ ಅನುಮತಿ ಪಡೆದು ಉಡುಗೊರೆ ನೀಡಿದ್ದರು. ಅಮರೇಂದ್ರ ಅವರ ತಂದೆ ಕಾಲದಿಂದಲೂ ಹುಲಿ ಚರ್ಮ ಮನೆಯಲ್ಲಿತ್ತು. ಆ ಹುಲಿ ಚರ್ಮವನ್ನು ವಿನಯ್ ಗುರೂಜಿಗೆ ನೀಡಿದ್ದರು. ಈ ಹಿಂದೆಯೂ ಅವಧೂತ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೋ ವೈರಲ್ ಆಗಿತ್ತು. ಹೀಗಾಗಿ 2022 ರಲ್ಲಿ ಅದನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಲಾಗಿದೆ ಎನ್ನುವ ಮೂಲಕ ಹುಲಿ ಚರ್ಮದ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.