
ಸೌಜನ್ಯಾ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದ ಬಳಿಕ ಸರ್ಕಾರದ ತೀರ್ಮಾನ – ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
- ಕರ್ನಾಟಕ
- August 29, 2023
- No Comment
- 59
ನ್ಯೂಸ್ ಆ್ಯರೋ : ಕುಮಾರಿ ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಮರು ತನಿಖೆಗಾಗಿ ಒತ್ತಾಯಗಳು ಕೇಳಿಬರುತ್ತಿದ್ದು, ನ್ಯಾಯಾಲಯದ ಆದೇಶದ ಬಳಿಕ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಜನ್ಯಾ ಪ್ರಕರಣದಲ್ಲಿ ಪರ, ವಿರೋಧ ಚರ್ಚೆಗಳು, ಪ್ರತಿಭಟನೆಗಳು ನಡೆಯುತ್ತಿರುವುದನ್ನು ಗಮನಿಸಿದ್ದೇವೆ. ಆದರೆ ಸರ್ಕಾರ ಈವರೆಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.
ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಅಲ್ಲಿ ಯಾವ ತೀರ್ಪು ಬರಲಿದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ಸರ್ಕಾರ ಒಂದು ರೀತಿ ನಿರ್ಧಾರ ತೆಗೆದುಕೊಳ್ಳುವುದು, ನ್ಯಾಯಾಲಯ ಮತ್ತೊಂದು ರೀತಿ ತೀರ್ಪು ನೀಡುವುದರಿಂದ ಗೊಂದಲಗಳಾಗಬಾರದು. ಈ ಕಾರಣಕ್ಕೆ ನಾವು ನ್ಯಾಯಾಲಯದ ಆದೇಶವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು.
ಕಳೆದ ಬಾರಿ ಗೃಹಸಚಿವ ಪರಮೇಶ್ವರ್ ಸೌಜನ್ಯಾ ಪ್ರಕರಣದಲ್ಲಿ ಮರುತನಿಖೆ ಇಲ್ಲ ಎಂದಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಇದೀಗ ಕಾದು ನೋಡುವ ಬಗ್ಗೆ ನೀಡಿರುವ ಹೇಳಿಕೆ ಮತ್ತೆ ಸೌಜನ್ಯಾ ಪ್ರಕರಣದ ಹೋರಾಟಗಾರರಿಗೆ ಹೊಸ ಹುರುಪು ತಂದಿದೆ.