
ಮಣಿಪಾಲ : ಒಂದು ವರ್ಷದ ಮಗುವಿಗೆ ಯಶಸ್ವಿ ಮೂಳೆ ಮಜ್ಜೆಯ ಕಸಿ ಚಿಕಿತ್ಸೆ – ಏನಿದು ಸಮಸ್ಯೆ? ವೈದ್ಯರ ಸಾಹಸ ಎಂಥಾದ್ದು?
- ಕರಾವಳಿ
- August 29, 2023
- No Comment
- 42
ನ್ಯೂಸ್ ಆ್ಯರೋ : ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಯಶಸ್ವಿ ಗ್ರಾಫ್ಟ್ ಮ್ಯಾನಿಪುಲೇಟೆಡ್ ಅರ್ಧ – ಹೊಂದಾಣಿಕೆಯ ಮೂಳೆ ಮಜ್ಜೆಯ ಕಸಿ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ.
ಮಣಿಪಾಲದ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದ ಒಂದು ವರ್ಷದ ಮಗುವಿಗೆ ಸಿವಿಯರ್ ಕಂಬೈನ್ಡ್ ಇಮ್ಮುನೊ ಡೆಫಿಸಿನ್ಸಿ ಹೆಸರಿನ ತೀವ್ರ ತರಹದ ರೋಗ ನಿರೋಧಕ ಶಕ್ತಿ ಕೊರತೆ ಕಾಯಿಲೆ ಪತ್ತೆಯಾಗಿತ್ತು.
ಅಸ್ಥಿಮಜ್ಜೆ ಕಸಿ ಮಾತ್ರವೇ ಮಗುವಿನ ಕಾಯಿಲೆ ಗುಣಪಡಿಸಬಲ್ಲ ಇದ್ದ ಏಕೈಕ ಚಿಕಿತ್ಸೆಯಾಗಿದ್ದರಿಂದ ಆಸ್ಪತ್ರೆಯ ವೈದ್ಯರ ತಂಡ ಮೂಳೆ ಮಜ್ಜೆ ಕಸಿಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಮೂಳೆ ಮಜ್ಜೆಯ ಕಸಿ ಸಂಕೀರ್ಣ ಚಿಕಿತ್ಸೆಯಾಗಿದ್ದು, ಥಲಸ್ಸೆಮಿಯಾ, ಮೂಳೆ ಮಜ್ಜೆಯ ವೈಫಲ್ಯ, ಇಮ್ಯುನೊ ಡಿಫಿಶಿಯನ್ಸಿ ಹಾಗೂ ಕ್ಯಾನ್ಸರ್‌ನಂತಹ ರೋಗಗಳನ್ನು ಶಾಶ್ವತವಾಗಿ ಗುಣಪಡಿಸುವ ಚಿಕಿತ್ಸೆಯಾಗಿದೆ.
ಈ ಚಿಕಿತ್ಸೆಯಲ್ಲಿ ರೋಗಗ್ರಸ್ತ ಮೂಳೆ ಮಜ್ಜೆಯನ್ನು ತೆಗೆದು ಹಾಕಿ ಬದಲಿಗೆ ರೋಗಮುಕ್ತ ಕಾಂಡಕೋಶಗಳನ್ನು ಬಳಸಿ ಆರೋಗ್ಯಕರ ರಕ್ತದ ಕಣಗಳನ್ನು ತಯಾರಿಸುವ ಮೂಳೆ ಮಜ್ಜೆಯನ್ನು ಕಸಿ ಮಾಡಲಾಗುತ್ತದೆ. ಮಗುವಿನ ತಂದೆಯನ್ನು ಅಸ್ತಿಮಜ್ಜೆ ಕಸಿಗೆ ದಾನಿಯಾಗಿ ಆಯ್ಕೆ ಮಾಡಿಕೊಳ್ಳಲಾಯಿತು.
ಮಗು ಮಾರಣಾಂತಿಕ ಕ್ಷಯ ಸೋಂಕಿನಿಂದ ಬಳಲುತ್ತಿದ್ದ ಕಾರಣ ಕಿಮೋಥೆರಪಿ ಮತ್ತು ಇಮ್ಯುನೊಸಪ್ರೆಸಿವ್ ಔಷಧಗಳನ್ನು ಬಳಸದೆ ಟಿಸಿಆರ್ ಆಲ್ಫಾ ಬೀಟಾ ಡಿಪ್ಲೀಷನ್ ಎಂದು ಕರೆಯಲ್ಪಡುವ ಸ್ಟೆಮ್ ಸೆಲ್ ಗ್ರಾಫ್ಟ್ ಮ್ಯಾನಿಪ್ಯುಲೇಷನ್ ತಂತ್ರಜ್ಞಾನ ಬಳಸಲಾಗಿದೆ.
ಮಗುವಿಗೆ ಮೂಳೆ ಮಜ್ಜೆಯ ಕಸಿ ಮಾಡಿ 6 ವಾರಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು ಮಗು ರೋಗ ಮತ್ತು ಸೋಂಕಿನಿಂದ ಮುಕ್ತವಾಗಿ ಆರೋಗ್ಯಕರ ಜೀವನ ನಡೆಸುತ್ತಿದೆ.