
ವಿನಯ ಗುರೂಜಿಗೆ ಪತ್ರ ಬರೆದ ಗೋವಿಂದ ಬಾಬು ಪೂಜಾರಿ – ಬಾಲ್ಯ, ಬೆಳೆಸಿದ ಉದ್ಯಮದ ಪಯಣದ ಜೊತೆ ವಂಚನೆಯನ್ನು ವಿವರಿಸಿದ್ದು ಹೀಗೆ…
- ಕರ್ನಾಟಕ
- September 16, 2023
- No Comment
- 101
ನ್ಯೂಸ್ ಆ್ಯರೋ : ಚೈತ್ರಾ ಕುಂದಾಪುರ ನಡೆಸಿರುವ ವಂಚನೆ ಪ್ರಕರಣದಲ್ಲಿ ಮೋಸ ಹೋದ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಮನನೊಂದು ಅವಧೂತ ವಿನಯ ಗುರೂಜಿಯವರಿಗೆ ಪತ್ರ ಬರೆದಿದ್ದು, ಇದರಲ್ಲಿ ಅವರು ನಡೆದಿರುವ ಘಟನೆ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.
ಈ ಪತ್ರದಲ್ಲಿ ಅವರು ತಾವು ಹೇಗೆ ಕಷ್ಟ ಪಟ್ಟು ಬದುಕು ಪ್ರಾರಂಭಿಸಿದೆ, ಚೈತ್ರಾ ಕುಂದಾಪುರ ಗ್ಯಾಂಗ್ ನಿಂದ ಮೋಸ ಹೋದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಅಲ್ಲದೇ ಹಿರಿಯರಾದ ತಾವು ನನ್ನ ಬದುಕಿಗೆ ದಾರಿ ತೋರಬೇಕು ಎಂಬುದನ್ನು ವಿವರಿಸಿದ್ದಾರೆ.
ಕಷ್ಟಪಟ್ಟು ಏಳನೇ ತರಗತಿ ಓದಿ ಮುಂಬಯಿಗೆ ಹೋಗಿ ಜೀವನ ಪ್ರಾರಂಭಿಸಿದೆ. ಮುಂಬಯಿನ ಹೊಟೇಲ್ ಗಳಲ್ಲಿ ಪ್ಲೇಟ್ ತೊಳೆದು ಕೆಲಸ ಪ್ರಾರಂಭಿಸಿ ಫೈವ್ ಸ್ಟಾರ್ ಹೊಟೇಲ್ ಗೆ ಸೇರಿಕೊಂಡೆ. ಬಳಿಕ ಐದು ಮಂದಿ ಸೇರಿಕೊಂಡು ಒಂದು ಉದ್ಯಮವನ್ನುಪ್ರಾರಂಭಿಸಿದೆ.
ತಮಿಳುನಾಡು, ಗುಜರಾತ್, ಆಂಧ್ರದಲ್ಲಿ ಮನೆ, ಕಂಪೆನಿಗೆ ಆಹಾರ ಸೇವೆ ಒದಗಿಸಲು ಪ್ರಾರಂಭ ಮಾಡಿದೆ. ಬಂದ ಲಾಭದಲ್ಲಿ ವೃದ್ಧಾಶ್ರಮ, ಅನಾಥಾಶ್ರಮ, ಕೋವಿಡ್ ಸಂದರ್ಭದಲ್ಲಿ ಶಿಕ್ಷಣಕ್ಕೆ ಸಹಾಯ ಮಾಡಿದೆ. ನನ್ನ ಜೀವನದಲ್ಲಿ ಈವರೆಗೆ 15 ರಿಂದ 20 ಸಾವಿರ ಮನೆ/ ಜನರಿಗೆ ಸಹಾಯ ಮಾಡಿದ್ದೇನೆ. ಹಿರಿಯರ ಮಾರ್ಗದರ್ಶನದಂತೆ ಆರ್‌ಎಸ್‌ಎಸ್‌ನ ಐಟಿಸಿ ಕೋರ್ಸ್ ಮುಗಿಸಿ, ಆಪ್ತರ ಮಾರ್ಗದರ್ಶನದಿಂದ ಬಿಜೆಪಿ ಸೇರಿದೆ.
ಕಳೆದ ಆರು ವರ್ಷಗಳಿಂದ ಬಿಜೆಪಿ ಸದಸ್ಯನಾಗಿದ್ದೇನೆ. ನನ್ನ ಜೊತೆಯೇ ಕೆಲಸ ಮಾಡುತ್ತಿದ್ದ ಪ್ರಸಾದ್ ಬೈಂದೂರು, ಚೈತ್ರಾಳನ್ನು ಪರಿಚಯಿಸಿದ್ದು ಬಳಿಕ ಅವಳಿಂದ ಗಗನ್ ಕಡೂರು ಪರಿಚಯವಾಗಿದೆ. ನಂತರ ಬಿಜೆಪಿ ಮತ್ತು ಆರ್ ಎಸ್ ಎಸ್ ಎಂದು ವಿಶ್ವನಾಥ್ ಜಿ, ಅಭಿನವ ಸ್ವಾಮೀಜಿ , ನಾಯ್ಕ್ ಒಬ್ಬೊಬ್ಬರಾಗಿ ಪರಿಚಯವಾಗಿದ್ದಾರೆ.
ಚಿಕ್ಕಮಗಳೂರು, ಬೆಂಗಳೂರು, ಮಂಗಳೂರಿನಲ್ಲಿ ಹಂತಹಂತವಾಗಿ 5.50 ಕೋಟಿ ಪಡೆದಿರುವ ಅವರು ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ಹರಿದ 10 ರೂ. ನೋಟು ಮೂಲಕ ಕೋಡ್ ವರ್ಡ್ ಮಾಡಿ ನಾವು ಹಣ ಹಸ್ತಾಂತರ ಮಾಡಿದ್ದೇವೆ. ನನ್ನ ಆಸ್ತಿಯನ್ನೂ ಗಿರವಿ ಇಟ್ಟಿದ್ದೇನೆ. ಒಮ್ಮೆ ಮೂರು ಕೋಟಿ ಬಳಿಕ ಖಾಸಗಿ ಫೈನಾನ್ಸ್ ನಿಂದ 2 ಕೋಟಿ ಸಾಲ ಪಡೆದಿದ್ದೇನೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಪತ್ರದ ಕೊನೆಯಲ್ಲಿ ರಾಷ್ಟ್ರೀಯ ಪಕ್ಷ, ಆರ್‌ಎಸ್‌ಎಸ್ ಸಂಘ ಎಂದು ಹೇಳಿ ಅವರು ನನಗೆ ಮೋಸ ಮಾಡಿದ್ದಾರೆ. ರಾಜಕೀಯದ ಆಮಿಷ ತೋರಿಸಿ ನನ್ನನ್ನು ಹಳ್ಳಕ್ಕೆ ತಳ್ಳಿದರು. ಹಿರಿಯರಾದ ತಾವು ನನಗೆ ದಾರಿ ತೋರಿಸಬೇಕು. ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇದೆ. ನನಗೆ ನ್ಯಾಯ ಒದಗಿಸಲು ಸಹಕಾರ ಮಾಡಿ ಎಂದು ಅವರು ಸ್ವಾಮೀಜಿ ಬಳಿ ವಿನಂತಿ ಮಾಡಿದ್ದಾರೆ.