
ಇಸ್ರೇಲ್ ಗಾಗಿ ಈಟಿ ಹಿಡಿದು ಹೋರಾಡಿದ್ದ ಮೈಸೂರಿನ ಯೋಧರು..! – ಇತಿಹಾಸದ ಪುಟದಲ್ಲಿ ಅಚ್ಚೊತ್ತಿರುವ ಈ ಘಟನೆ ಬಗ್ಗೆ ನಿಮಗ್ಗೊತ್ತಾ?
- ಕರ್ನಾಟಕ
- October 17, 2023
- No Comment
- 112
ನ್ಯೂಸ್ ಆ್ಯರೋ : ಇಸ್ರೇಲ್ ಗಾಗಿ ಮೈಸೂರಿನ ಸೈನಿಕರು ಒಂದು ಕಾಲದಲ್ಲಿ ಯುದ್ಧ ಮಾಡಿದ್ದರು ಎಂದರೆ ನಂಬಬಹುದೇ? ಎಲ್ಲಿಯ ಇಸ್ರೇಲ್ ಎಲ್ಲಿಯ ಮೈಸೂರು ? ಆದರೂ ಇಸ್ರೇಲ್ ಗಾಗಿ ಒಂದು ಕಾಲದಲ್ಲಿ ಹೋರಾಡಿದ್ದಾರೆ ನಮ್ಮ ಮೈಸೂರಿನ ಯೋಧರು ಎಂದರೆ ನಂಬಲೇಬೇಕು. ಇಸ್ರೇಲ್ ಮತ್ತು ಹಮಾಸ್ ಯುದ್ಧದಲ್ಲಿ ನಡುವೆ ಇದು ಈಗ ನೆನಪಾಗುತ್ತಿದೆ.
ಟಿಪ್ಪು ಸುಲ್ತಾನ್ ನ ಮರಣದ ಬಳಿಕ ಅಳಿದುಳಿದ ಸೈನಿಕರನ್ನು ಸೇರಿಸಿಕೊಂಡು ಮೈಸೂರು ಲ್ಯಾನ್ಸರ್ ಸೇನೆ ಕಟ್ಟಲಾಯಿತು. ಈ ಸೇನೆ ಮೈಸೂರು ಮಹಾರಾಜರ ವೈಯಕ್ತಿಕ ಸೈನ್ಯವಾಗಿತ್ತು.
ಮೈಸೂರು ಮಹಾರಾಜರು ಮತ್ತು ಬ್ರಿಟಿಷರ ನಡುವೆ ಮೈತ್ರಿ ಒಪ್ಪಂದ ನಡೆದ ಮೇಲೆ ರೆಗ್ಯುಮೆಂಟರ್ ಬಿ ಚಾಮರಾಜ ಅರಸು ಅವರ ನೇತೃತ್ವದಲ್ಲಿ ಲ್ಯಾನ್ಸರ್ ಪಡೆಯನ್ನು ಬ್ರಿಟನ್, ಫ್ರಾನ್ಸ್, ರಷ್ಯಾ, ಇಟಲಿ ಮತ್ತು ಯುನೈಟೆಡ್ ಸ್ಟೇಟ್ಸ್ ಮಿತ್ರರಾಷ್ಟ್ರಗಳ ಸಹಾಯಕ್ಕಾಗಿ ಕಳುಹಿಸಲಾಗಿತ್ತು.
1918ರಲ್ಲಿ ಮೊದಲೇ ಮಹಾಯುದ್ಧ ಮುಗಿಯುವ ಹಂತದಲ್ಲಿತ್ತು. ಈ ವೇಳೆಗೆ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಸಂಸ್ಥಾನಗಳಾದ ಮೈಸೂರು, ಜೋಧ್‌ಪುರ ಮತ್ತು ಹೈದರಾಬಾದ್‌ನ ರಾಜ್ಯಗಳ ಮೂರು ರೆಜಿಮೆಂಟ್‌ಗಳಿಗೆ ಹೈಫಾವನ್ನು ವಶಪಡಿಸಿಕೊಳ್ಳುವ ಆದೇಶ ನೀಡಲಾಯಿತು.
ಜೋಧ್‌ಪುರ ಲ್ಯಾನ್ಸರ್‌ಗಳು ಕಿಶೋನ್ ನದಿ- ಮೌಂಟ್ ಕಾರ್ಮೆಲ್‌ನ ಇಳಿಜಾರುಗಳ ನಡುವಿನ ಪ್ರದೇಶವನ್ನು ವಶಪಡಿಸಿಕೊಳ್ಳಲು ಹಾಗೂ ಮೈಸೂರು ಲ್ಯಾನ್ಸರ್‌ಗಳು ಪೂರ್ವ ಮತ್ತು ಉತ್ತರದಿಂದ ಹೈಫಾ ಪಟ್ಟಣದ ಮೇಲೆ ದಾಳಿ ನಡೆಸಲು ಸಜ್ಜಾಗಿತ್ತು.
ಮೈಸೂರು ರೆಜಿಮೆಂಟ್ ಸುಮಾರು 29 ಅಧಿಕಾರಿಗಳು, 526 ಕುದುರೆಗಳು ಮತ್ತು 40 ಕ್ಕೂ ಹೆಚ್ಚು ಹೇಸರಗತ್ತೆಗಳು, 444 ಸೈನಿಕರನ್ನು ಒಳಗೊಂಡಿತ್ತು.
ಮಷಿನ್ ಗನ್‌ಗಳಿಂದ ರಕ್ಷಣೆ ಪಡೆದಿದ್ದ ಹೈಫಾ ನಗರಕ್ಕೆ ಲ್ಯಾನ್ಸರ್‌ಗಳು ಈಟಿಯಂತಹ ಜಾವೆಲಿನ್ ಹಿಡಿದುಕೊಂಡು ದಾಳಿ ನಡೆಸಿದ್ದರು. ಇಬ್ಬರು ಜರ್ಮನ್ ಅಧಿಕಾರಿಗಳು, 35 ಒಟ್ಟೋಮನ್ ಅಧಿಕಾರಿಗಳು, 17 ಫಿರಂಗಿ ಬಂದೂಕುಗಳು, 11 ಮೆಷಿನ್ ಗನ್‌ಗಳು ಸೇರಿದಂತೆ 1350 ಜರ್ಮನ್ ಮತ್ತು ಒಟ್ಟೋಮನ್ ಕೈದಿಗಳನ್ನು ಮೈಸೂರು ಲ್ಯಾನ್ಸರ್ಸ್ ಮತ್ತು ಜೋಧ್‌ಪುರದ ಪಡೆ ವಶಪಡಿಸಿಕೊಂಡಿತು.
ಇಸ್ರೇಲ್‌ನಲ್ಲಿ ಸುಮಾರು 400 ವರ್ಷಗಳ ಸುದೀರ್ಘ ಒಟ್ಟೋಮನ್ ಟರ್ಕರ ಆಳ್ವಿಕೆಯನ್ನು ಮೈಸೂರು ಲ್ಯಾನ್ಸರ್ ಪಡೆಯು ಉರುಳಿಸಿ ಇಸ್ರೇಲ್‌ಗೆ ವಿಜಯದ ಹಾರ ಹಾಕುವಂತೆ ಮಾಡಿತ್ತು. ಒಟ್ಟಿನಲ್ಲಿ ನಮ್ಮ ಮೈಸೂರು ಯೋಧರ ಕಥೆ ಇಸ್ರೇಲ್ ನಲ್ಲಿ ಇತಿಹಾಸದಲ್ಲಿ ಅಜರಾಮರವಾಗಿದ್ದು, ಬಹುತೇಕ ಜನರಿಗೆ ಈ ವಿಚಾರ ತಿಳಿದಿಲ್ಲ.