ಸರಿಗಮಪ ಖ್ಯಾತಿಯ ಅಂಧ ಗಾಯಕಿ ನಿಧನ; ವಿಶಿಷ್ಟ ಗಾಯನದ ಮೂಲಕ ಜನಮನ್ನಣೆ ಗಳಿಸಿದ್ದ ಮಂಜಮ್ಮ ಇನ್ನಿಲ್ಲ
ನ್ಯೂಸ್ ಆ್ಯರೋ: ಜೀ ಕನ್ನಡ ವಾಹಿನಿಯ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಅಂಧ ಸಹೋದರಿಯರಾದ ಮಂಜಮ್ಮ ಮತ್ತು ರತ್ನಮ್ಮ ತಮ್ಮ ಹಾಡುಗಳಿಂದಲೇ ಖ್ಯಾತಿ ಗಳಿಸಿದ್ದರು. ಇದೀಗ ಮಂಜಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಂಜಮ್ಮ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.
ತಡರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮಂಜಮ್ಮಳನ್ನ ಕಳೆದುಕೊಂಡು ಕುಟುಂಬ ಕಣ್ಣೀರಿಡುತ್ತಿದೆ. ಅಂಧರಾಗಿದ್ದ ಮಂಜಮ್ಮ ಝೀ ಕನ್ನಡ ವಾಹಿನಿಯ ಸರಿಗಮಪ ಸಿಂಗಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪಾರ ಜನಮನ್ನಣೆ ಗಳಿಸಿದ್ದರು.
ಆರಂಭದಲ್ಲಿಯೇ ಸುಸಜ್ಜಿತ ಮನೆಯಿಲ್ಲದೆ ಕಷ್ಟಪಡುತ್ತಿದ್ದ ಈ ಅಂಧ ಗಾಯಕಿಯರಿಗೆ ಮನೆ ಕಟ್ಟಿಸಿಕೊಡುವ ಕುರಿತು ಈ ಮುಂಚೆ ನವರಸ ನಾಯಕ ಜಗ್ಗೇಶ್ ಹೇಳಿಕೊಂಡಿದ್ದರು. ಅದಕ್ಕಾಗಿ ತುಮಕೂರಿನ ತಮ್ಮ ಅಭಿಮಾನಿ ಸಂಘದ ಮೂಲಕ ಬೇಕಾದ ವ್ಯವಸ್ಥೆ ಮಾಡುವುದಕ್ಕೆ ಸೂಚಿಸಿದ್ದರು. ಮಧುಗಿರಿ ತಾಲ್ಲೂಕಿನ ದೇವಸ್ಥಾನದ ಬಳಿ ಹಾಡುತ್ತಿದ್ದ ಈ ಸಹೋದರಿಯ ಕಷ್ಟ ಕಂಡು ನಟ ಜಗ್ಗೇಶ್ ಕೂಡ ತಮ್ಮ ಸಹಾಯಹಸ್ತ ಚಾಚುವ ಕುರಿತು ಹೇಳಿಕೊಂಡಿದ್ದರು.
ಸರಿಗಮಪ ಕಾರ್ಯಕ್ರಮದಲ್ಲಿ ಈ ದೇವರಮಕ್ಕಳ ಸ್ಥಿತಿಕಂಡು ಭಾವುಕನಾದೆ!ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು.. ಆ ಕಾರ್ಯ ಶಿರಬಾಗಿ ಮಾಡಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿ ಸಂಘಗೆ ವಹಿಸಲಾಗಿತ್ತು. ಎಂದು ಜಗ್ಗೇಶ್ ಅವರು ಬರೆದುಕೊಂಡಿದ್ದರು. ಅದರಂತೆ ಈ ಮನೆಗೆ ಜಗ್ಗೇಶ್-ಪರಿಮಳ ನಿಲಯ ಎಂದು ಹೆಸರಿಡಲಾಗಿತ್ತು. ಶ್ರೀರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ಮಾರ್ಚ್ 12ರಂದು ಗೃಹ ಪ್ರವೇಶ ನಡೆದಿತ್ತು.
Leave a Comment