ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ಫಿಕ್ಸ್; ಇದರ ಹಿನ್ನಲೆಯೇನು ತಿಳಿಯಿರಿ

ನ್ಯೂಸ್ ಆ್ಯರೋ: ಒಟ್ಟು 11 ದಿನಗಳ ಕಾಲ ನಡೆಯುವ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿ ಆಗಿದೆ. ಏಪ್ರಿಲ್ 4ರಿಂದ ಏಪ್ರಿಲ್ 14 ರವರೆಗೆ ನಡೆಯಲಿದೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಬೆಂಗಳೂರು ಕರಗ ಸಂಬಂಧ ಸೋಮವಾರ ರಾತ್ರಿ ಸಭೆ ನಡೆಯಿತು. ಈ ಸಭೆಯಲ್ಲಿ, ಕರಗ ಹೊರುವ ಪೂಜಾರಿಯಾಗಿ ಎ.ಜ್ಞಾನೇಂದ್ರ ಒಮ್ಮತದಿಂದ ಆಯ್ಕೆಯಾದರು. ಇವರು 14 ವರ್ಷಗಳಿಂದ ಬೆಂಗಳೂರು ಕರಗ ಹೊರುತ್ತಿದ್ದಾರೆ. ಈ ವರ್ಷ ಕೊನೆಯ ಬಾರಿ ಬೆಂಗಳೂರು ಕರಗ ಹೊರಲಿದ್ದಾರೆ ಎನ್ನಲಾಗಿದೆ.

‘ಕರಗ’ ಎಂಬ ಹೆಸರು ಹೂವಿನ ದಿಂಡು ಮತ್ತು ದೇವಿಯ ವಿಗ್ರಹವನ್ನು ಹೊಂದಿರುವ ಕಲಶದ ಅನುರೂಪವಾಗಿದೆ. ಕರಗವನ್ನು ಮುಟ್ಟದೆ ಅಂದರೆ ಹೂವಿನ ದಿಂಡಿನಿಂದ ಅಲಂಕೃತಗೊಂಡ ಮಣ್ಣಿನ ಮಡಿಕೆ ಅದರಲ್ಲಿರುವ ಕಲಶವನ್ನು ಕೈಯಲ್ಲಿ ಮುಟ್ಟದೆ ಆ ಕಲಶವನ್ನು ಹೊರುವ ವ್ಯಕ್ತಿಯ ತಲೆ ಮೇಲೆ ಇಡಲಾಗುತ್ತದೆ. ಕರಗವನ್ನು ಹೊರುವವನು ಮಹಿಳೆಯಂತೆ ಕಂಕಣ, ಮಂಗಳ-ಸೂತ್ರ ಮತ್ತು ಹಣೆಯ ಮೇಲೆ ಸಿಂಧೂರವನ್ನು ಇಟ್ಟುಕೊಂಡಿರುತ್ತಾನೆ. ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲೂ ನಾವು ಕರಗ ಉತ್ಸವದ ಉಲ್ಲೇಖವನ್ನು ಗುರುತಿಸಬಹುದಾಗಿದೆ. ಕರಗವು ದ್ರೌಪದಿಯನ್ನು ಸರ್ವೋತ್ಕೃಷ್ಟ ಮಹಿಳೆ ಎಂದು ಚಿತ್ರಿಸುತ್ತದೆ ಮತ್ತು ಅವಳನ್ನು ಶಕ್ತಿ ದೇವತೆ ಎಂದು ಗೌರವಿಸುತ್ತದೆ. ಇಂದು ಬೆಂಗಳೂರಿನಲ್ಲಿ ಅತ್ಯಂತ ಪ್ರಸಿದ್ಧ ಕೊರಗ ಉತ್ಸವವನ್ನು ಆಚರಿಸಲಾಗುವುದು.
ಕರಗದ ಇತಿಹಾಸ ಮತ್ತು ಮಹತ್ವ ಹೀಗಿದೆ:
ಈ ಕರಗ ಆಚರಣೆಯ ಹಿಂದೆಯೂ ಒಂದು ವಿಶೇಷ ಹಾಗೂ ರೋಚಕ ಕಥೆಯಿದೆ. ಈ ಕಥೆಯ ಪ್ರಕಾರ, ಕುರುಕ್ಷೇತ್ರ ಸಮರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮೂರ್ಛೆತಪ್ಪಿ ಬೀಳುತ್ತಾಳೆ. ದ್ರೌಪದಿ ಮೂರ್ಛಿತಳಾಗಿ ಬಿದ್ದದ್ದು ಪಾಂಡವರಿಗೆ ತಿಳಿಯದೆ ಮುಂದೆ ನಡೆಯುತ್ತಾರೆ. ಆಕೆಗೆ ಎಚ್ಚರ ಬಂದು ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದನ್ನು ನೋಡುತ್ತಾಳೆ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗೌಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಠಿ ಮಾಡುತ್ತಾಳೆ.

ಹುಟ್ಟಿದ ಇವರೆಲ್ಲರೂ ಸೇರಿ ಆ ರಕ್ಕಸನ ಎದಿರು ಹೋರಾಡಿ ಗೆಲ್ಲುತ್ತಾರೆ. ನಂತರ ದ್ರೌಪದಿ ಆದಿಶಕ್ತಿಯಾಗಿ ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗಿ ನೆಲೆಸಲು ನಿರ್ಧರಿಸುತ್ತಾಳೆ. ತಾಯಿಯ ಅಗಲುವಿಕೆಯನ್ನು ನೆನೆದು ಆಕೆಯನ್ನು ಹೋಗದಂತೆ ಮಕ್ಕಳು ಬೇಡಿಕೊಳ್ಳುತ್ತಾರೆ. ಆಗ ಶ್ರೀಕೃಷ್ಣನು ಮಕ್ಕಳಿಗೆ ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕೈಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ ‘ಅಲಗುಸೇವೆ’ ಎನ್ನುತ್ತಾರೆ) “ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು” ಎಂದು ತಮ್ಮ ನೋವನ್ನು ತೋಡಿಕೊಳ್ಳಲು ಹೇಳುತ್ತಾನೆ. ಇದನ್ನು ನೋಡಿ ದ್ರೌಪದಿಗೆ ಮರುಕವಾಗಿ ಪ್ರತಿ ವರುಷವೂ ಮೂರು ದಿನ ಭೂಮಿಗೆ ಬಂದು ಮಕ್ಕಳೊಂದಿಗೆ ಇರುವುದಾಗಿ ಭರವಸೆಯನ್ನು ನೀಡುತ್ತಾಳೆ. ಆ ಮೂರು ದಿನಗಳನ್ನೇ ಕರಗ ಎಂದು ಆಚರಿಸಲಾಗುತ್ತದೆ.
ಇನ್ನೊಂದು ಕಥೆಯ ಪ್ರಕಾರ, ದ್ವಾಪರ ಯುಗದಲ್ಲಿ, ಒಂದು ಸರ್ವಾಲಂಕಾರ ಭೂಷಿತೆಯಾದ ದ್ರೌಪದಿ ಮಂಗಳ ಕಲಶವನ್ನು ಹಿಡಿದು ಸ್ವಯಂವರ ಮಂಟಪವನ್ನು ಪ್ರವೇಶಿಸಿದಳು. ಮತ್ಸ್ಯವನ್ನು ಭೇದಿಸುವ ಅರ್ಜುನನ್ನೂ, ಕುಂತಿಯ ಅಭಿಲಾಷೆಯಂತೆ ಉಳಿದ ನಾಲ್ವರು ಪಾಂಡವ ಸಹೋದರರನ್ನೂ ಶಾಸ್ತ್ರೋಕ್ತವಾಗಿ ವಿವಾಹವಾದಳು. ಆಗ ಸಂತೋಷದಿಂದ ತನ್ನ ಕೈಯಲಿದ್ದ ಕಲಶವನ್ನು ತಲೆಯ ಮೇಲೆ ಇಟ್ಟುಕೊಳ್ಳುತ್ತಾಳೆ. ಇದೇ ಮುಂದೆ ಕರಗ ಆಚರಣೆಯಾಗಿ ಅಸ್ಥಿತ್ವಕ್ಕೆ ಬಂದಿತೆನ್ನುವ ನಂಬಿಕೆಯಿದೆ.

ಕರಗ ಹೊರುವ ವೀರ ಕುಮಾರರು ಎಲ್ಲಾ ಬಗೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಂಡಿರುತ್ತಾರೆ. ಹುಣ್ಣಿಮೆಗೆ ಒಂಭತ್ತು ದಿನ ಇರುವಾಗ ಕರಗದ ಧಾರ್ಮಿಕ ಆಚರಣೆಗಳು ಆರಂಭವಾಗುತ್ತವೆ. ಮೊದಲು ಧರ್ಮರಾಯನ ಮಂದಿರದ ಮುಂದೆ ದ್ವಜಾರೋಹಣ, ದೀಪಾರತಿ ಉತ್ಸವ, ಹಸಿ ಕರಗ, ಪೊಂಗಲು ಸೇವೆ, ಹೂವಿನ ಕರಗ, ವಸಂತೋತ್ಸವ, ಗಾವುಸೇವೆ ಇತ್ಯಾದಿಗಳು ನಡೆಯುತ್ತದೆ.
ಕರಗದ ಹಿಂದಿನ ದಿನದಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಅತ್ಯಂತ ವಿಧಿವತ್ತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದ ನಂತರ ನಡುರಾತ್ರಿಯ ವೇಳೆಗೆ ಕಳಸದ ಆಕೃತಿಯ ಮಲ್ಲಿಗೆ ಹೂವಿನ ಕರಗವನ್ನು ಮುಖ ಮುಚ್ಚುವಂತೆ ತಲೆಯ ಮೇಲೆ ಹೊತ್ತ ಪೂಜಾರಿ ನರ್ತಿಸುತ್ತಾ ಗುಡಿಯಿಂದ ಹೊರಬರುತ್ತಾರೆ. ಧಾರ್ಮಿಕವಾಗಿ ಇವರು ಸಾಕ್ಷಾತ್ ಆದಿಶಕ್ತಿಯ ರೂಪವೆಂದು ಪರಿಗಣಿಸಲಾಗುತ್ತದೆ.
Leave a Comment