Ratan Tata : “ಕಲಿಯುಗದ ಕರ್ಣ” ರತನ್ ಟಾಟಾ ವಿಧಿವಶ – ಉದ್ಯಮ ಲೋಕದ ದಿಗ್ಗಜನ ಯುಗಾಂತ್ಯ
ನ್ಯೂಸ್ ಆ್ಯರೋ : ವಿಶ್ವದ ಪ್ರಸಿದ್ಧ ಕೈಗಾರಿಕೋದ್ಯಮಿ, ಟಾಟಾ ಸನ್ಸ್‌ನ ಗೌರವಾಧ್ಯಕ್ಷ, ಕೊಡುಗೈ ದಾನಿ ರತನ್ ಟಾಟಾ ಅವರು ಕಳೆದ ರಾತ್ರಿ ಅಂದರೆ ಅಕ್ಟೋಬರ್ 9ರ ಬುಧವಾರದಂದು 86 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನ ಹೊಂದಿದ್ದಾರೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ತಮ್ಮ ಪರೋಪಕಾರಿ ಕೆಲಸದಿಂದಾಗಿ ರತನ್ ಟಾಟಾ ಹೆಸರುವಾಸಿಯಾಗಿದ್ದರು.
ಟಾಟಾ ಸನ್ಸ್‌ನ ಎಮಿರಿಟಸ್ ಚೇರ್ಮನ್ ಆಗಿದ್ದ ಟಾಟಾ ತಮ್ಮ ಪರಿಶ್ರಮದಿಂದಲೇ ಟಾಟಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ಜಾಗತಿಕ ಮಟ್ಟದಲ್ಲಿ ಭಾರತವನ್ನು ಟಾಟಾ ಹೆಸರಿನೊಂದಿಗೆ ಗುರುತಿಸುವಂತೆ ಮಾಡಿದ್ದರು. ಲಕ್ಷ ರೂ.ಗಳ ನ್ಯಾನೋ ಕಾರು ಸಹ ವಿಶ್ವ ರಾಷ್ಟ್ರಗಳ ಗಮನ ಸೆಳೆದಿತ್ತು. ಕಾರು ಖರೀದಿಸುವ ಬಡವನ ಆಸೆಯನ್ನು ಟಾಟಾ ನನಸು ಮಾಡಿದ್ದಾರೆಂಬ ಮಾತು ಕೇಳಿಬಂದಿದ್ದವು.
ಕೆಲದಿನಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಟಾಟಾ ಸೋಮವಾರ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆ ಸೇರಿದ್ದರು. ಈ ವೇಳೆ ಅವರ ದೈಹಿಕ ಪರಿಸ್ಥಿತಿ ಹದಗೆಟ್ಟಿರುವುದಾಗಿ ಸುದ್ದಿ ಹರಿದಾಡಿತ್ತು. ಈ ಸಂಬಂಧ ರತನ್ ಟಾಟಾ ಅವರ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಲಾಗಿತ್ತು. ವಯೋಸಹಜ ಕಾರಣಗಳಿಗಾಗಿ ತಪಾಸಣೆಗೊಳಪಟ್ಟಿದ್ದಾರೆ. ಆತಂಕಗೊಳ್ಳುವಂಥದ್ದೇನು ಇಲ್ಲ ಎಂದು ಹೇಳಲಾಗಿತ್ತು. ಆದರೆ ಬುಧವಾರ ಟಾಟಾ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು.
ದುಬಾರಿ ಸಂಪತ್ತಿನ ಪಾರ್ಸಿ ಕುಟುಂಬದಲ್ಲಿ ರತನ್ ಟಾಟಾ 1937 ಡಿಸೆಂಬರ್ 28 ರಂದು ಬಾಂಬೆಯಲ್ಲಿ ಜನಿಸಿದರು. ಆದರೆ ಬಾಲ್ಯ ಕಷ್ಟಕರವಾಗಿತ್ತು. ತಂದೆ ಮತ್ತು ತಾಯಿ ಬೇರೆ ಬೇರೆಯಾದಾಗ ಅನಾಥ ಜೀವನವನ್ನು ಅನುಭವಿಸಿದರು. ಅಜ್ಜಿ ನವಾಜ್ಬಾಯಿ ಮೊಮ್ಮಗನನ್ನು ದತ್ತು ಪಡೆದರು. ಅಮೆರಿಕದಲ್ಲಿ ವಾಸ್ತುಶಿಲ್ಪ ಅಧ್ಯಯನ. ಈ ನಡುವೆ ಮೊಳಕೆಯೊಡೆದ ಪ್ರೇಮ ನಿರಾಶೆಯಲ್ಲಿ ಕೊನೆಗೊಂಡಿತು. ಇದರೊಂದಿಗೆ ಮದುವೆಯೇ ಬೇಡ ಎಂದು ನಿಶ್ಚಯಿಸಿದರು. ಭಾರತಕ್ಕೆ ಮರಳಿ ಜೆಮ್‌ಶೆಡ್‌ಪುರದಲ್ಲಿ ಟಾಟಾ ಸ್ಟೀಲ್‌ನಲ್ಲಿ ಕೆಲಸಕ್ಕೆ ಸೇರಿದರು. ನಂತರ ಟಾಟಾದ ಉನ್ನತ ಹುದ್ದೆಗಳಿಗೆ ಸೇರಿದರು.
ಆರಂಭದಲ್ಲಿ ಕೈಗೆತ್ತಿಕೊಂಡ ಉದ್ಯಮಗಳಲ್ಲಿ ಲಾಭ ಗಳಿಸಿದರು ನಂತರ ಅವುಗಳನ್ನು ಮುಚ್ಚಬೇಕಾಯಿತು. ಆದರೂ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದ ಜೆ.ಆರ್.ಡಿ ಟಾಟಾ ಅವರಿಗೆ ರತನ್ ಅವರ ಮೇಲೆ ಸಂಪೂರ್ಣ ನಂಬಿಕೆಯಿತ್ತು. ಜೀವನದಲ್ಲಿ ಏರಿಳಿತಗಳು ನಮ್ಮನ್ನು ಮುನ್ನಡೆಸಲು ಮುಖ್ಯ. ಏಕೆಂದರೆ ಇಸಿಜಿಯಲ್ಲಿ ಸಹ ನೇರ ರೇಖೆ ಇರುವುದಿಲ್ಲ. ಹಿನ್ನಡೆಗಳಲ್ಲಿ ರತನ್ ಅವರ ದೃಷ್ಟಿಕೋನ ಹೀಗಿತ್ತು.
1991 ರಲ್ಲಿ ಜೆ.ಆರ್.ಡಿ ಟಾಟಾ ಅವರು ಹುದ್ದೆಯಿಂದ ನಿವೃತ್ತರಾದಾಗ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಟಾಟಾ ಸ್ಟೀಲ್, ಟಾಟಾ ಟೀ, ಟಾಟಾ ಕೆಮಿಕಲ್ಸ್, ಟಾಟಾ ಹೋಟೆಲ್ಸ್‌ನಂತಹ ಟಾಟಾ ಕಂಪನಿಗಳ ಮುಖ್ಯಸ್ಥರಾಗಿದ್ದ ಎಲ್ಲರನ್ನೂ ಈ ನೇಮಕ ಆಶ್ಚರ್ಯಗೊಳಿಸಿತು. ನಂತರ ಟಾಟಾದಲ್ಲಿ ರತನ್ ಅವರ ಸಂಪೂರ್ಣ ಪ್ರಾಬಲ್ಯ. ಅಧಿಕಾರ ಮತ್ತು ಸಂಪತ್ತು ಮುಖ್ಯವಲ್ಲ ಎಂದು ತಮ್ಮ ಜೀವನದ ಮೂಲಕ ಸಾಬೀತುಪಡಿಸಿದರು. ಆಟೋಮೊಬೈಲ್ ಉದ್ಯಮದಲ್ಲಿ ಕಾಲಿಟ್ಟ ಟಾಟಾ, ಒಂದು ಲಕ್ಷ ರೂಪಾಯಿಗೆ ಕಾರು ಎಂಬ ಕನಸನ್ನು ನನಸಾಗಿಸಿದಾಗ ನಕ್ಕವರು ರತನ್ ಟಾಟಾ. ನ್ಯಾನೋ ಕಾರು ಭಾರತೀಯ ಮಧ್ಯಮ ವರ್ಗದ ಕನಸುಗಳನ್ನು ಹೊತ್ತು ಓಡಿತು.
ರತನ್ ಟಾಟಾ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ 2008ರಲ್ಲಿ ಪದ್ಮವಿಭೂಷಣ ಪ್ರಶಸಿ ನೀಡಲಾಗಿತ್ತು. ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸವೀಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಟಾಟಾ ಟೆಲಿ ಸರ್ವೀಸಸ್, ಟಾಟಾ ಫೈನಾನ್ಸ್ ಸೇರಿ ರತನ್ ಟಾಟಾ ಹಲವು ಉದ್ಯಮಗಳನ್ನು ಕಟ್ಟಿ ಬೆಳೆಸಿದ್ದರು.
Leave a Comment