ಭಾರತದ ರೈಲು ಹಳಿ, ಗ್ಯಾಸ್ ಪೈಪ್ ಲೈನ್ ಮೇಲೆ ಸ್ಲೀಪರ್ ಸೆಲ್ ಗಳ ದಾಳಿ ಬೆದರಿಕೆ – ಪಾಕಿಸ್ತಾನಕ್ಕೂ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟಕ್ಕೂ ಎತ್ತಣದಿಂದೆತ್ತಣ ಸಂಬಂಧ..!?

ನ್ಯೂಸ್ ಆ್ಯರೋ : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಆರೋಪಿಯ ಬಂಧನವಾಗಿದ್ದು, ಅದರ ಮಾಸ್ಟರ್ ಮೈಂಡ್ ನ ಹುಡುಕಾಟದಲ್ಲಿದ್ದ ಎನ್ಐಎ ಗೆ ಮಹತ್ವದ ಸುಳಿವು ಸಿಕ್ಕಿದೆ. ಭಾರತದ ವಿವಿಧೆಡೆ ರೈಲು ಹಳಿ, ಗ್ಯಾಸ್ ಪೈಪ್ಲೈನ್ಗಳ ಮೇಲೆ ಸ್ಲೀಪರ್ ಸೆಲ್ಗಳ ಮೂಲಕ ದಾಳಿ ನಡೆಸುವುದಾಗಿ ಪಾಕಿಸ್ತಾನಿ ಉಗ್ರನೊಬ್ಬ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದ್ದು, ಫರ್ಹತುಲ್ಲಾ ಘೋರಿ ಎಂಬ ಉಗ್ರನ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಆತ ಬೆದರಿಕೆ ಒಡ್ಡಿದ್ದು, ಈತನೇ ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಂಚುಕೋರ ಎನ್ನಲಾಗುತ್ತಿದೆ.
ಇದುವರೆಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಈ ವಿಚಾರ ಖಚಿತಪಡಿಸಿಲ್ಲ. ಆದರೂ, ಟೆಲಿಗ್ರಾಂನಲ್ಲಿ ಬಿಡುಗಡೆಯಾಗಿರುವ 3 ನಿಮಿಷಗಳ ವಿಡಿಯೋ ಕುರಿತು ಎನ್ಐಎ ಹೈಅಲರ್ಟ್ ಆಗಿರುವುದಾಗಿ ತಿಳಿದು ಬಂದಿದೆ. ಮುಂಬೈ, ದೆಹಲಿ ಸೇರಿ ಮಹಾನಗರಗಳಲ್ಲಿ ರೈಲ್ವೆ ಸಂಪರ್ಕವನ್ನು ಹಳಿತಪ್ಪಿಸಲು ಘೋರಿ ವಿಡಿಯೋದಲ್ಲಿ ಸ್ಲೀಪರ್ ಸೆಲ್ಗಳಿಗೆ ಕರೆ ಕೊಟ್ಟಿದ್ದಾನೆ.
ಭಾರತ ಸರ್ಕಾರ ಜಾರಿ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ಗುಪ್ತಚರ ಸಂಸ್ಥೆ ಮೂಲಕ ಸ್ಲೀಪರ್ ಸೆಲ್ಗಳ ಆಸ್ತಿ ದುರ್ಬಲಗೊಳಿಸುತ್ತಿದೆ. ಹೀಗಾಗಿ ರೈಲುಗಳು ಅಲ್ಲದೆ ಭಾರತದ ಪೆಟ್ರೋಲಿಯಂ ಪೈಪ್ಲೈನ್ಗಳನ್ನು ನಾಶ ಮಾಡಬೇಕು. ಈ ಮೂಲಕ ಭಾರತ ಸರ್ಕಾರವನ್ನು ಅಲುಗಾಡಿಸಬೇಕು ಎಂದು ಘೋರಿ ಹೇಳಿದ್ದಾನೆ. ಬೆದರಿಕೆ ವಿಡಿಯೋ 3 ವಾರಗಳ ಹಿಂದೆ ಟೆಲಿಗ್ರಾಮ್ ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ಮಾಹಿತಿ ನೀಡಿವೆ ಎನ್ನಲಾಗಿದೆ.
ಕಳೆದ ಮಾ.1ರಂದು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಘೋರಿಯ ಪಾತ್ರ ಇರುವ ಬಗ್ಗೆ ಎನ್ಐಎ ಅಧಿಕಾರಿಗಳು ಖಚಿತ ಪಡಿಸಿಲ್ಲ. ಈಗಾಗಲೇ ಈ ಪ್ರಕರಣ ಸಂಬಂಧ ಏ.12ರಂದು ಪಶ್ಚಿಮ ಬಂಗಾಳದಲ್ಲಿ ಪ್ರಮುಖ ಆರೋಪಿಗಳಾದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್ ಎಂಬುವರನ್ನು ಬಂಧಿಸಿದ್ದಾರೆ. ಆದರೆ, ಫರ್ಹತುಲ್ಲಾ ಘೋರಿ ಅಳಿಯ ದಕ್ಷಿಣ ಭಾರತದಲ್ಲಿ ಸ್ಲೀಪರ್ ಸೆಲ್ಗಳ ಸಂಪರ್ಕ ಹೊಂದಿದ್ದಾನೆ. ಈ ವಿಷಯ ಕಳೆದೊಂದು ವರ್ಷದ ಹಿಂದೆ ದೆಹಲಿ ಮತ್ತು ಉತ್ತರ ಪ್ರದೇಶದಿಂದ ಮೂವರು ವಾಂಟೆಡ್ ಉಗ್ರರನ್ನು ಬಂಧಿಸಿದಾಗ ಮಾಹಿತಿ ಬಹಿರಂಗವಾಗಿತ್ತು.
ವಿಡಿಯೋದಲ್ಲಿ ‘ಫಿದಾಯೀನ್ ಯುದ್ಧ’ ಸಾರಿರುವ ಘೋರಿ ಹಿಂದು ಮುಖಂಡರ ಮತ್ತು ಪೊಲೀಸರ ವಿರುದ್ಧ ಆತ್ಮಹುತಿ ದಾಳಿ ನಡೆಸುವ ಬೆದರಿಕೆ ಒಡ್ಡಿದ್ದಾನೆ. ಇತ್ತೀಚೆಗೆ ವಂದೇ ಭಾರತ್ ರೈಲು ಹಳಿತಪ್ಪಿಸುವ ಉದ್ದೇಶದಿಂದ ಆ.23 ಮತ್ತು 24ರಂದು ರೈಲು ಹಳಿಯ ಮೇಲೆ ಸಿಮೆಂಟ್ ಬ್ಲಾಕ್ ಇರಿಸಿದ್ದು ಬೆಳಕಿಗೆ ಬಂದಿತ್ತು.

ಅಬು ಸೂಫಿಯಾನ್, ಸರ್ದಾರ್ ಸಾಹಬ್ ಮತ್ತು ಫಾರೂ ಎಂದು ಕರೆಯುವ ಫರ್ಹತುಲ್ಲಾ ಘೊರಿ, 2002ರಲ್ಲಿ ಗುಜರಾತ್ನ ಅಕ್ಷರಧಾಮ ದೇವಾಲಯದ ಮೇಲೆ ದಾಳಿ ನಡೆಸಿದ್ದ. ಜತೆಗೆ 2005ರಲ್ಲಿ ಹೈದರಾಬಾದ್ನ ಟಾಸ್ಕ್ ಫೋರ್ಸ್ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಈತನ ಕೈವಾಡ ಇರುವುದು ದೃಢಪಟ್ಟಿತ್ತು. ಅಲ್ಲದೆ, ಐಸಿಸ್ ಅನ್ನು ಭಾರತದಲ್ಲಿ ಬಲಗೊಳಿಸುವ ಸಲುವಾಗಿ ಅಮಾಯಕ ಮುಸ್ಲಿಂ ಯುವಕರಿಗೆ ಜಿಹಾದ್ ಬೋಧನೆ ಮಾಡಿ ಉಗ್ರ ಸಂಘಟನೆಗೆ ನೇಮಕ ಮಾಡುವಲ್ಲಿ ನಿರತನಾಗಿದ್ದಾನೆ.
Leave a Comment