ಕಾರ್ಕಳ : ಪರಶುರಾಮನ ಮೂರ್ತಿ ನಕಲಿಯೇ? ನಕಲಿಯಾದ್ರೆ ಯಾಕೆ ಎಫ್‌ಐಆ‌ರ್ ಆಗಿಲ್ಲ? – ಅಕ್ರಮದಲ್ಲಿ ಸರಕಾರಕ್ಕೂ ಪಾಲು ಇದೆಯಾ? ಮುಚ್ಚಿ ಹಾಕುವ ನೌಟಂಕಿ ಆಟ ಆಡ್ತಿರೋದ್ಯಾರು?

ಕಾರ್ಕಳ : ಪರಶುರಾಮನ ಮೂರ್ತಿ ನಕಲಿಯೇ? ನಕಲಿಯಾದ್ರೆ ಯಾಕೆ ಎಫ್‌ಐಆ‌ರ್ ಆಗಿಲ್ಲ? – ಅಕ್ರಮದಲ್ಲಿ ಸರಕಾರಕ್ಕೂ ಪಾಲು ಇದೆಯಾ? ಮುಚ್ಚಿ ಹಾಕುವ ನೌಟಂಕಿ ಆಟ ಆಡ್ತಿರೋದ್ಯಾರು?

ನ್ಯೂಸ್ ಆ್ಯರೋ : ಬಿಜೆಪಿ ಸರ್ಕಾರ ಇದ್ದಾಗ ತರಾತುರಿಯಲ್ಲಿ ಪರಶುರಾಮ ಥೀಂ ಪಾರ್ಕ್ ಉದ್ಘಾಟನೆ ಮಾಡಿತ್ತು. ಕಾಂಗ್ರೆಸ್‌ ಸರಕಾರ ಬರುತ್ತಿದ್ದಂತೆ, ಅಲ್ಲಿ ಪರಶುರಾಮನ ನಕಲಿ ಮೂರ್ತಿ ಸ್ಥಾಪಿಸಿದ್ದಾರೆ ಎಂಬ ಆರೋಪ ಬಂದಿತ್ತು. ಒಂದಷ್ಟು ಮಂದಿ ನಕಲಿ ಮೂರ್ತಿ ಬಗ್ಗೆ ತನಿಖೆಗಾಗಿ ಗೋಗರೆದು ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ರು. ಕೊನೆಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ‌, ಮೂರ್ತಿ ಅರ್ಧ ನಕಲಿ, ಅರ್ಧ ಅಸಲಿ ಎಂದು ಕಾಗೆ ಹಾರಿಸಿ ಹೋಗಿದ್ದರು.

ಇದರ ಮಧ್ಯೆ ಎರಡು ವಾರಗಳ ಹಿಂದೆ ದಿಢೀರ್ ಆಗಿ ಪರಶುರಾಮನ ಮೂರ್ತಿಯೇ ನಾಪತ್ತೆ ಆಗಿತ್ತು. ಪ್ರವಾಸೋದ್ಯಮ ಇಲಾಖೆಯಾಗಲೀ, ಕಾಮಗಾರಿ ಹೊಂದಿದ್ದ ನಿರ್ಮಿತಿ ಆಗಲಿ ಮೂರ್ತಿ ಎಲ್ಲಿದೆ, ಯಾಕಾಗಿ ತೆರವು ಮಾಡಿದ್ದಾರೆ ಎನ್ನೋದ್ರ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರಂತೂ ಜನಸಾಮಾನ್ಯರು ಹುಚ್ಚರು ಅನ್ನುವಂತೆ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್ ನಾಯಕರು ಎಂಎಲ್ಸಿ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಸತ್ಯಶೋಧನೆಗೆ ಹೋಗಿದ್ದಾಗ, ಮೂರ್ತಿಯ ಕೆಳಗಿನ ಭಾಗದಲ್ಲಿ ರಟ್ಟು, ಫೈಬರ್ ಇರೋದನ್ನು ನೋಡಿ ಹರಿದು ಹಾಕಿದ್ದರು. ಇದರ ಫೋಟೋ, ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ತಮ್ಮದೊಂದು ಸತ್ಯಶೋಧನೆ ಮಾಡಿ ವಿಡಿಯೋ ಮಾಡಿದ್ದರು.

ಮೂರ್ತಿಯ ಕಾಲು,ಪಾದ, ತೊಡೆಯ ಭಾಗಕ್ಕೆ ಸುತ್ತಿಗೆಯಲ್ಲಿ ಹೊಡೆದು ಕಂಚಿನದ್ದೇ ಎಂದು ಸಾಬೀತು ಮಾಡಲು ಹೊರಟಿದ್ದರು. ಸುತ್ತಿಗೆಯಲ್ಲಿ ಹೊಡೆಯುವಾಗಲೇ ಕಾಲಿನಲ್ಲಿ ಹಾಕಿದ್ದ ರಿಂಗ್ ಮಾತ್ರ ಟೈಂ ಎಂದು ಸದ್ದು ಮಾಡಿತ್ತು. ಉಳಿದೆಲ್ಲವೂ ಡಬ, ಡಬ ಸದ್ದು ಉಸುರಿದ್ದೇ ಅದು ಕಂಚಿನದ್ದಲ್ಲ ಎಂದು ಸಾರಿ ಹೇಳುವಂತಿತ್ತು. ಆದರೆ ಬಿಜೆಪಿ ಕಾರ್ಯಕರ್ತರು ಮಾತ್ರ ಇದು ಕಂಚಿನದ್ದೇ, ಇಷ್ಟು ಹೊಡೆದರೂ ಏನೂ ಆಗಿಲ್ಲ. ಯಾರು ಕೂಡ ಬಂದು ಪರಿಶೀಲನೆ ಮಾಡಿ ಎಂದು ಸವಾಲು ಹಾಕುವ ರೀತಿ ವಿಡಿಯೋ ಮಾಡಿ ಹಂಚಿದ್ದರು. ಇದರೊಂದಿಗೆ ಫೇಸ್ಟುಕ್ ಮತ್ತು ಇತರ ಜಾಲತಾಣಗಳಲ್ಲಿ ಪರಶುರಾಮನ ಮೂರ್ತಿ ವಿಚಾರ ಬೆಂಕಿ ಹೊತ್ತಿಸಿಕೊಂಡಿತ್ತು.

ಬೆಂಕಿ, ರೋಷ ತಾರಕಕ್ಕೆ ಏರುತ್ತಲೇ ತಾನು ಮಾಡಿದ್ದೇ ಸರಿ ಎನ್ನುವಂತೆ ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಾರ್ಕಳದ ಬಿಜೆಪಿ ಕಚೇರಿಯಲ್ಲಿ ಘಂಟೆ ನಾದ ಎಬ್ಬಿಸುವ ರೀತಿ ಭಾಷಣ ಮಾಡಿದ್ದಾರೆ. ಅದು ಪರಶುರಾಮನ ಮೂರ್ತಿ ಅಷ್ಟೇ, ಅಪಮಾನ ಆಗುವುದಕ್ಕೆ ಧಾರ್ಮಿಕ ಸಂಕೇತ ಅಲ್ಲ. ಪ್ರವಾಸೋದ್ಯಮ ಬೆಳೆಯಬೇಕು ಅನ್ನುವ ದೃಷ್ಟಿಯಿಂದ, ಜನಾಕರ್ಷಣೆ ಉದ್ದೇಶದಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಅಷ್ಟೇ. ಅಲ್ಲಿ ಚಪ್ಪಲಿ ಹಾಕಿದರೂ ಚಿಂತೆ ಇಲ್ಲ ಅದರಲ್ಲಿ ಧರ್ಮ, ಸಂಸ್ಕೃತಿ ವಿಚಾರ ಬರುವುದಿಲ್ಲ ಏನೋ ಹೊಸ ಶೋಧದ ರೀತಿ ಹೇಳಿಕೊಂಡಿದ್ದಾರೆ.

ಆದರೆ ಮೂರ್ತಿ ನಕಲಿಯೇ, ಅಸಲಿಯೇ, ಕಂಚಿನದ್ದು ಅಲ್ಲವೇ ಅನ್ನುವ ಪ್ರಶ್ನೆ ಬಗ್ಗೆ ತುಟಿ ಬಿಚ್ಚಿಲ್ಲ. ಒಬ್ಬ ಶಾಸಕನಾಗಿ ತನಗೆ ಬೇಕಾದ ರೀತಿ ಮಾತನಾಡಿದ್ದು, ತಪ್ಪನ್ನು ಮುಚ್ಚಿ ಹಾಕಲು ಕಾರ್ಯಕರ್ತರನ್ನು ಭೂಬಿಟ್ಟು ಏನೆಲ್ಲ ಕಸರತ್ತು ಮಾಡೋದು, ಅದರಲ್ಲಿ ರಾಜಕೀಯ ಮಾಡೋದು ಓಕೆ.

ಇತ್ತ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸಿಗೆ, ಅದರ ನಾಯಕರಿಗೆ ಏನಾಗಿದೆ ? ಪರಶುರಾಮನ ಕಂಚಿನ ಮೂರ್ತಿ ಹೆಸರಲ್ಲಿ ಒಂದೆರಡಲ್ಲ 14 ಕೋಟಿ ರೂಪಾಯಿ ಸಾರ್ವಜನಿಕ ದುಡ್ಡನ್ನು ಲೂಟಿ ಮಾಡುವ ಯೋಜನೆಯ ಬಗ್ಗೆ ಏನೂ ಆಗಿಯೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಇಷ್ಟೆಲ್ಲ ರಾದ್ಧಾಂತ ಮಾಡಿದ್ರೂ ಜಿಲ್ಲಾ ಉಸ್ತುವಾರಿ ಆಗಲೀ, ರಾಜ್ಯದ ಜವಾಬ್ದಾರಿ ಹೊತ್ತವರಾಗಲೀ ಮೌನದಲ್ಲೇ ಇದ್ದಾರೆ. ಇವರ ಮೌನ ನೋಡಿದರೆ, ಅಲ್ಲಿ ಆಗಿರುವ ಭ್ರಷ್ಟಾಚಾರದಲ್ಲಿ ಇವರಿಗೂ ಪಾಲು ಇದೆಯಾ ಅನ್ನುವ ಅನುಮಾನ ಬರುವಂತಿದೆ.

ಆಡಳಿತ ಪಕ್ಷವಾಗಿ ಸ್ಥಳೀಯ ಶಾಸಕರ ಎದುರಾಳಿಯಾಗಿದ್ದರೂ ಕಾಂಗ್ರೆಸ್ ನಾಯಕರು ಒಪ್ಪಂದ ಮಾಡಿರುವ ರೀತಿ ತನಿಖೆಯನ್ನೂ ಮಾಡದೆ ಮೌನಕ್ಕೆ ಶರಣಾಗಿದ್ದು, ನಕಲಿ ಮೂರ್ತಿಯನ್ನು ಪ್ರತಿಷ್ಠೆ ಮಾಡಿ ಜನರನ್ನು ಮೂರ್ಖರನ್ನಾಗಿಸಿದರೂ ಎಫ್‌ಐಆರ್ ದಾಖಲಿಸದೆ ಮೌನವಾಗಿದ್ದು ಇವರದ್ದೆಲ್ಲ ನಾಟಕ ಅನ್ನುವುದಕ್ಕೆ ತಜ್ಞ ಬರಬೇಕಾಗಿಲ್ಲ. ನಕಲಿ ಎಂದಾಗಿದ್ದರೆ, ಮೊದಲು ಎಫ್‌ಐಆರ್ ದಾಖಲಿಸಿ ತನಿಖೆಗೆ ಕೊಡಬೇಕಿತ್ತು. ಅದಕ್ಕೆ ಯಾರೆಲ್ಲ ಹೊಣೆ ಅನ್ನೋದನ್ನು ನೋಡಿ ಸಸ್ಪೆಂಡ್ ಮಾಡಬೇಕಿತ್ತು. ಅದು ಯಾವುದನ್ನೂ ಮಾಡಿಲ್ಲ ಎಂದರೆ, ಇವರದ್ದು ಮುಚ್ಚಿ ಹಾಕುವ ನಾಟಕ ಎನ್ನಬೇಕಷ್ಟೇ.

ವಿರೋಧ ಮಧ್ಯೆಯೇ ಮೂರ್ತಿ ನಿಲ್ಲಿಸಿದ್ದ ಶಾಸಕ

ಪರಶುರಾಮನನ್ನು ತುಳುನಾಡಿನ ಸೃಷ್ಟಿಕರ್ತನೆಂದು ವಾದಿಸುವ ಮಂದಿ ಇದ್ದಾರೆ. ಅದನ್ನು ಸುಳ್ಳು ಎಂದು ಹೇಳಿ ವಾದಿಸುವ ಮಂದಿಯೂ ತುಳುನಾಡಿನಲ್ಲಿದ್ದಾರೆ. ಜನಪದ ಹಿನ್ನೆಲೆಗಿಂತ ವಿಭಿನ್ನವಾಗಿರುವ ಮಹಾಬ್ರಾಹ್ಮಣ ಪರಶುರಾಮನ ಕತೆಯನ್ನು ವೈದಿಕರು ಜನರ ಮೇಲೆ ಹೇರಿದ್ದಾರೆ ಎನ್ನುವ ಮಂದಿ ಕಳೆದ ಬಾರಿ ಪರಶುರಾಮನ ಮೂರ್ತಿ ಪ್ರತಿಷ್ಠೆ ವಿಚಾರ ಬಂದಾಗಲೇ ವಿರೋಧ ವ್ಯಕ್ತಪಡಿಸಿದ್ದರು. ತುಳುನಾಡಿನ ದೈವಗಳನ್ನು ಕೆಳಕ್ಕೆ ತಳ್ಳಿ ಅದರ ಮೇಲೆ ಮೂರ್ತಿ ಪ್ರತಿಷ್ಠೆ ಮಾಡಲಾಗಿದೆ ಎಂದೂ ದೂರಿದ್ದರು. ವೈರುಧ್ಯ ವಾದ- ವಿವಾದಗಳ ನಡುವೆ ತರಾತುರಿಯಲ್ಲಿ ಪರಶುರಾಮನ ಮೂರ್ತಿ ಎದ್ದು ನಿಂತಿತ್ತು. ಅಷ್ಟೇ ತರಾತುರಿ ಎನ್ನುವಂತೆ 2023ರ ಜನವರಿ ಕೊನೆಯಲ್ಲಿ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ಲೋಕಾರ್ಪಣೆ ಮಾಡಲಾಗಿತ್ತು.

ವಿಪರ್ಯಾಸ ಅಂದ್ರೆ, ಲೋಕಾರ್ಪಣೆ ಆಗಿದ್ದು ಬಿಟ್ಟರೆ ಈ ಪ್ರವಾಸೋದ್ಯಮ ಕೇಂದ್ರವನ್ನು ಜನರಿಗೆ ಸರಿಯಾಗಿ ನೋಡುವುದಕ್ಕೇ ಬಿಡಲಿಲ್ಲ. ಬೇಸಗೆಯಲ್ಲಿ ಜನರು ಒಮ್ಮೆಲೇ ಮುಗಿಬಿದ್ದ ಬೆನ್ನಲ್ಲೇ ಏನೋ ನೆಪವೊಡ್ಡಿ ಬಂದ್ ಮಾಡಲಾಗಿತ್ತು. ಆನಂತರ, ಮಳೆಗಾಲದಲ್ಲಿ ಅದೇನೋ ತೊಂದರೆ ಇದೆಯೆಂದು ಬಂದ್ ಮಾಡಿದ್ದರು. ಈಗ ಮತ್ತೆ ಸ್ವಲ್ಪ ಕೆಲಸ ಬಾಕಿಯಿದೆ ಎಂದು ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ. ಥೀಮ್ ಪಾರ್ಕ್ ಒಳ್ಳೆಯ ಪರಿಕಲ್ಪನೆಯೇ ಆಗಿದ್ದರೂ, ಕಂಚಿನದ್ದೆಂದು ಹೇಳುತ್ತ ನಕಲಿಯನ್ನು ತೋರಿಸಿ ಮೋಸ ಮಾಡಿದ್ದು ಅಕ್ಷಮ್ಯ ಅನ್ನಲೇಬೇಕು. ಮೂರ್ತಿ ಹೆಸರಲ್ಲಿ ತಿಂದು ತೇಗಿದವರನ್ನೂ ಮತ್ತೆ ಕಕ್ಕಿಸುವ ಕೆಲಸವೂ ಆಗಬೇಕು. ಪಕ್ಷದ ಶಾಸಕರೇ ಇಲ್ಲ ಎಂದು ಕರಾವಳಿ ಬಗ್ಗೆ ಅಸಡ್ಡೆ ಹೊಂದಿರುವ ಸಿದ್ದರಾಮಯ್ಯ ಈ ಬಗ್ಗೆ ಇನ್ನಾದ್ರೂ ಎಚ್ಚರಗೊಳ್ಳುತ್ತಾರಾ ನೋಡಬೇಕು.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *