
2024ರ ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಲ್ಲಿ ಭರ್ಜರಿ ತಯಾರಿ ಶುರು – 7 ಕ್ಷೇತ್ರಗಳ ಜವಾಬ್ದಾರಿ ಹೊತ್ತುಕೊಂಡ ಕಮಲ ಪಾಳಯದ ಪಂಟರ್ ಗಳು ಯಾರು?
- ರಾಜಕೀಯ
- August 27, 2023
- No Comment
- 55
ನ್ಯೂಸ್ ಆ್ಯರೋ : ಮುಂಬರುವ 2024ರ ವಿಧಾನಪರಿಷತ್ ಚುನಾವಣೆ ಸಂಬಂಧ ರಾಜ್ಯ ಬಿಜೆಪಿಯಲ್ಲಿ ಈಗಾಗಲೇ ತಯಾರಿ ಜೋರಾಗಿದ್ದು, ಇದೀಗ 7 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಬಿ. ಶ್ರೀರಾಮುಲು, ಸಿ.ಟಿ ರವಿ, ಆರ್.ಅಶೋಕ್, ಡಿ.ವಿ. ಸದಾನಂದಗೌಡ, ಕೆ.ಎಸ್. ಈಶ್ವರಪ್ಪ ಹಾಗೂ ಡಾ. ಸಿ.ಎನ್. ಅಶ್ವತ್ಥ್ನಾರಾಯಣ್ರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಯಾವ ಕ್ಷೇತ್ರಕ್ಕೆ ಯಾರು?
ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಬಿ.ಶ್ರೀರಾಮುಲು, ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸಿ.ಟಿ ರವಿ, ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಆರ್.ಅಶೋಕ್, ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಡಿ.ವಿ.ಸದಾನಂದಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಕೆ.ಎಸ್. ಈಶ್ವರಪ್ಪ, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ್ ಅವರನ್ನು ನೇಮಕ ಮಾಡಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಬಿ ಶ್ರೀರಾಮುಲು, ಸಿ ಟಿ ರವಿಗೆ ಅವಕಾಶ ನೀಡುವ ಜೊತೆಗೆ ಚುನಾವಣೆ ನಿಲ್ಲದೆ ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನೀಡಲಾಗಿದೆ. ಈಶ್ವರಪ್ಪ ಅವರಿಗೆ ಮತ್ತೊಮ್ಮೆ ಹೆಚ್ಚಿನ ಜವಾಬ್ದಾರಿ ನೀಡಿ ಆಯನೂರು ಮಂಜುನಾಥ್ ರಾಜೀನಾಮೆಯಿಂದ ತೆರವಾದ ಕ್ಷೇತ್ರವನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಹೊಣೆ ನೀಡಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, 2024ರ ಜೂನ್ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನ ಪರಿಷತ್ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಿದ್ದು, ಅವರೆಲ್ಲ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದರು.