
ಆಶ್ರಯ ಸಮಿತಿ ಅಧ್ಯಕ್ಷರಾಗಿ ಡಾ.ಯತೀಂದ್ರ ನೇಮಕ – ಪುತ್ರನಿಗೆ ಗುಟ್ಟಾಗಿ ಪಟ್ಟ ಕಟ್ಟಿ ಟೀಕೆಗೊಳಗಾದ ಸಿಎಂ
- ರಾಜಕೀಯ
- August 27, 2023
- No Comment
- 45
ನ್ಯೂಸ್ ಆ್ಯರೋ : ಆಶ್ರಯ ಸಮಿತಿ ಅಧ್ಯಕ್ಷರಾಗಿ ಡಾ.ಯತೀಂದ್ರ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪುತ್ರನಿಗೆ ಗುಟ್ಟಾಗಿ ಈ ಹುದ್ದೆಯನ್ನು ನೀಡಿದ್ದಾರೆ ಎಂದು ವಿರೋಧ ಪಕ್ಷದವರು ಕಿಚಾಯಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಅವರು, ನನ್ನನ್ನು ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 15 ದಿನಗಳ ಹಿಂದೆಯೇ ಆದೇಶವಾಗಿದ್ದು, ವರುಣಾ ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಯನ್ನು ಆಲಿಸುತ್ತೇನೆ. ಕಳೆದ 15 ದಿನದ ಹಿಂದೆಯೇ ಆದೇಶ ಆಗಿದೆ. ಆದೇಶ ಪತ್ರವನ್ನು ನಿಮಗೆ ಕಳುಹಿಸಿಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಸರಕಾರಿ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಭಾಗಿಯಾಗುವುದರೊಂದಿಗೆ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿದ್ದವು. ಬಳಿಕ ಬಹಿರಂಗವಾಗಿ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದನ್ನು ಬಿಟ್ಟ ಡಾ.ಯತೀಂದ್ರ ಅವರು ಸಿಎಂ ನಿವಾಸದಲ್ಲೇ ಅಧಿಕಾರಿಗಳ ಸಭೆ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು.
ಈ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಿತ್ತು. ಈ ಸಂಬಂಧ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಸಮಿತಿ ಸದಸ್ಯರನ್ನಾಗಿ ಅವರನ್ನು ನೇಮಕ ಮಾಡಲು ಚಿಂತನೆ ನಡೆಸಿದ್ದರು. ಆದ್ರೆ ಇದೀಗ ಯಾವುದೇ ಸದ್ದಿಲ್ಲದೆ ಯತೀಂದ್ರ ಅವರನ್ನು ನೇಮಿಸಿದ್ದು, ಮತ್ತೆ ಚರ್ಚೆಗೆ ಕಾರಣವಾಗಿದೆ.