
ಶಬರಿಮಲೆ ದೇವಸ್ಥಾನಕ್ಕೆ ತೆರಳಲು ವ್ರತ ಆರಂಭಿಸಿದ ಕ್ರೈಸ್ತ ಪಾದ್ರಿ – ಪರವಾನಗಿ, ಗುರುತಿನ ಚೀಟಿ ಹಿಂಪಡೆದ ಚರ್ಚ್
- ರಾಷ್ಟ್ರೀಯ ಸುದ್ದಿ
- September 11, 2023
- No Comment
- 72
ನ್ಯೂಸ್ ಆ್ಯರೋ : ಕೇರಳದ ಶಬರಿಮಲೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಘೋಷಿಸಿರುವ ಕ್ರೈಸ್ತ ಪಾದ್ರಿಯೊಬ್ಬರಿಗೆ ಕರ್ತವ್ಯ ನಿರ್ವಹಿಸದಂತೆ ಭಾರತೀಯ ಆಂಗ್ಲಿಕನ್ ಚರ್ಚ್ ನಿರ್ಬಂಧ ವಿಧಿಸಿದೆ. ಮಾತ್ರವಲ್ಲ ಪರವಾನಗಿ ಮತ್ತು ಗುರುತಿನ ಚೀಟಿಯನ್ನು ವಾಪಸ್ ಪಡೆದುಕೊಂಡಿದೆ.
ಏನಿದು ಘಟನೆ?
ತಿರುವಮಂತಪುರಂ ಮೂಲದ, 50 ವರ್ಷದ ಪಾದ್ರಿ ರೆವರೆಂಡ್ ಡಾ. ಮನೋಜ್ ಕೆ.ಜಿ. ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿವುದಾಗಿ ಘೋಷಿಸಿ ವ್ರತ ಆರಂಭಿಸಿ, ಸ್ಥಳೀಯ ದೇವಸ್ಥಾನದಿಂದ ಸಾಂಪ್ರದಾಯಿಕ ಜಪಮಾಲೆ ಪಡೆದುಕೊಂಡು ಧರಿಸಿದ್ದಾರೆ. ಸೆಪ್ಟಂಬರ್ 20ರಂದು ಅವರು ಶಬರಿಮಲೆಗೆ ತೆರಳಲು ನಿರ್ಧರಿಸಿದ್ದಾರೆ.
ಡಾ. ಮನೋಜ್ ಹೇಳಿದ್ದೇನು?
ನಾನು ದೇವರ ಸಿದ್ಧಾಂತಗಳನ್ನು ಅಳವಡಿಸಿಕೊಂಡವನು. ದೇವರು ಯಾವುದೇ ಜಾತಿ, ಮತ, ದರ್ಮ ಲೆಕ್ಕಿಸದೆ ಪ್ರೀತಿ ಮಾಡು ಎನ್ನುತ್ತಾರೆ. ಹೀಗಾಗಿ ಚರ್ಚ್ ಅನ್ನು ಪ್ರೀತಿಸಬೇಕೋ ಅಥವಾ ದೇವರನ್ನೋ ಎಂದು ನನಗೆ ತಿಳಿಯಲಿಲ್ಲ. ಚರ್ಚ್ ಸಿದ್ಧಾಂತಗಳಿಗೆ ತಕ್ಕಂತೆ ಕೆಲಸ ಮಾಡುವವನಲ್ಲ ಎಂದು ಡಾ. ಮನೋಜ್ ತಿಳಿಸಿದ್ದಾರೆ.
ನಾನು ಸಮುದಾಯಗಳ ನಡುವೆ ಇದ್ದು ಕೆಲಸ ಮಾಡಲು ಆಸಕ್ತಿ ಹೊಂದಿದ್ದೇನೆ. ಹೀಗಾಗಿ ಪ್ಯಾರಿಶ್ ಸ್ವೀಕರಿಸದಿರಲು ನಿರ್ಧರಿಸಿದ್ದೇನೆ. ನನ್ನ ಸ್ವಾತಂತ್ರ್ಯವನ್ನು ಆಧ್ಯಾತ್ಮವನ್ನು ಆಳವಾಗಿ ಅನ್ವೇಷಿಸಲು ಬಳಸಿಕೊಳ್ಳುತ್ತೇನೆ. ಇದು ಇತರ ಧರ್ಮಗಳ ಕುರಿತು ಕಲಿಯುವ ಪ್ರಯತ್ನದ ಭಾಗ ಎಂದು ಹೇಳಿದ್ದಾರೆ.
ಸದ್ಯ ಡಾ. ಮನೋಜ್ ಅವರ ನಡೆ ಸಾಂಪ್ರದಾಯಿಕ ಕ್ರೈಸ್ತರ ಟೀಕೆಗೆ ಗುರಿಯಾಗಿದೆ. ಚೆನ್ನೈಯಲ್ಲಿರುವ ಆರ್ಕ್ ಡಯೋಸಿಸ್ ಪಾಲಿಸುವ ಪಾದ್ರಿಗಳು ಡಾ. ಮನೋಜ್ ಅವರನ್ನು ನಿರ್ಬಂಧಿಸಲು ನಿರ್ಧರಿಸಿದ್ದಾರೆ.
ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಡಾ.ಮನೋಜ್ 2010ರಲ್ಲಿ ಆಧ್ಯಾತ್ಮಿಕದತ್ತ ಆಕರ್ಷಿತರಾದರು. ಸುಮಾರು 27 ವರ್ಷ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು 2015ರಲ್ಲಿ ಉದ್ಯೋಗ ತೊರೆದರು. 2022ರಲ್ಲಿ ಪಾದ್ರಿ ಮಾನ್ಯತೆ ಪಡೆದುಕೊಂಡರು.