
ವಿಮಾನದಲ್ಲಿ ತಾಂತ್ರಿಕ ದೋಷ; ಭಾರತದಲ್ಲೇ ಉಳಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ
- ರಾಷ್ಟ್ರೀಯ ಸುದ್ದಿ
- September 12, 2023
- No Comment
- 42
ನ್ಯೂಸ್ ಆ್ಯರೋ : ಭಾರತದ ಅಧ್ಯಕ್ಷತೆಯಲ್ಲಿ ದಿಲ್ಲಿಯಲ್ಲಿ ನಡೆದ ಜಿ-20 ಶೃಂಗಸಭೆ ಯಶಸ್ವಿಯಾಗಿ ಸಂಪನ್ನವಾಗಿದೆ. ಶೃಂಗಸಭೆಯಲ್ಲಿ ಭಾಗವಹಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರವಿವಾರವೇ ಸ್ವದೇಶಕ್ಕೆ ಮರಳಬೇಕಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವ ಹಿನ್ನಲೆಯಲ್ಲಿ ಅವರು ಇನ್ನೂ ಭಾರತದಲ್ಲೇ ಇದ್ದಾರೆ.
ಹಾರಾಟ ರದ್ದು
ಟ್ರುಡೊ ಮತ್ತು ಅಧಿಕಾರಿಗಳನ್ನೊಳಗೊಂಡ ನಿಯೋಗ ದಿಲ್ಲಿಗೆ ಬಂದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ರವಿವಾರ ಅದರ ಹಾರಾಟ ರದ್ದಾಗಿತ್ತು. ಈಗಲೂ ಅದನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಸೋಮವಾರ ರಾತ್ರಿ ಕೆನಡಾದಿಂದ ಇನ್ನೊಂದು ವಿಮಾನ ಭಾರತ ತಲುಪುವ ನಿರೀಕ್ಷೆ ಇತ್ತು. ಆದರೆ ಅದನ್ನು ಕೂಡ ಲಂಡನ್ ನಲ್ಲಿ ಇಳಿಸಲಾಗಿದೆ. ಆದರೆ ಇಲ್ಲಿ ಇಳಿಸಲು ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ.
ಟ್ರುಡೊ ಬದಲಿ ವಿಮಾನದಲ್ಲಿ ಸ್ವದೇಶಕ್ಕೆ ತೆರಳುತ್ತಾರೋ ಅಥವಾ ಮೂಲ ವಿಮಾನ ದುರಸ್ತಿಯಾಗುವವರೆಗೂ ಕಾಯುತ್ತಾರೊ ಎನ್ನುವುದು ಸ್ಪಷ್ಟವಾಗಿಲ್ಲ.
ಟ್ರುಡೊ ಜೊತೆಗೆ ಅವರ ಪುತ್ರನೂ ಬಂದಿದ್ದು, ಇಬ್ಬರೂ ಭಾರತದಲ್ಲೇ ಉಳಿಯುವಂತಾಗಿದೆ. ಟ್ರುಡೊ ಬಳಸುವ ವಿಮಾನ 36 ವರ್ಷಗಳನ್ನು ಹಳೆಯದು. ಈ ಹಿಂದೆಯೂ ಸಮಸ್ಯೆ ಕಂಡು ಬಂದಿತ್ತು.