ವಿಧಾನ ಪರಿಷತ್ ಉಪಚುನಾವಣೆ, ಮತ ಎಣಿಕೆ ಆರಂಭ; ಒಂದು ಸೀಟು ಯಾರ ಮಡಿಲಿಗೆ ?
ನ್ಯೂಸ್ ಆ್ಯರೋ: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದ ಉಪಚುನಾವಣೆಯ ಮತಗಳ ಎಣಿಕೆ ಇಂದು ನಗರದ ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾಗಿದೆ.
ಮತ ಎಣಿಕೆಗೆ ಒಂದು ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, 12 ಮೇಜುಗಳಲ್ಲಿ ಎಣಿಕೆ ನಡೆಯುತ್ತಿದೆ. ಪ್ರತಿ ಮೇಜಿಗೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬರು ಸಹಾಯಕರು ಮತ್ತು ಒಬ್ಬರು ‘ಡಿ’ ಗ್ರೂಪ್ ಸಿಬ್ಬಂದಿ ಇದ್ದಾರೆ. ಒಟ್ಟು 392 ಮತ ಪೆಟ್ಟಿಗೆಗಳನ್ನು ಪ್ರತಿ ಟೇಬಲ್ಗೆ 33 ರಂತೆ ಮತಪೆಟ್ಟಿಗೆಗಳನ್ನು ಹಂಚಿಕೆ ಮಾಡಲಾಗಿದೆ.
ಮೊದಲ ಹಂತದಲ್ಲಿ ಒಟ್ಟು ಮತಗಳ ಎಣಿಕೆ ಮತ್ತು ಮಿಶ್ರಣ ಕಾರ್ಯ, ಎರಡನೇ ಹಂತದಲ್ಲಿ ಮತಪತ್ರಗಳ ಸಿಂಧುತ್ವ ಪರಿಶೀಲನೆ ಮಾಡಿ ನಂತರ ಒಂದನೇ ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಲಾಗುತ್ತದೆ. ನಿಗದಿತ ಕೋಟಾವನ್ನು ಮೊದಲ ಪ್ರಾಶಸ್ತ್ಯದಲ್ಲಿ ಪಡೆದ ಅಭ್ಯರ್ಥಿಯ ಆಯ್ಕೆ ಘೋಷಿಸಲಾಗುತ್ತದೆ. ಸೋಮವಾರ ನಡೆದ ಚುನಾವಣೆಯಲ್ಲಿ ಒಟ್ಟು 392 ಮತಗಟ್ಟೆಗಳಲ್ಲಿ 5,906 ಮತದಾರರು ಮತ ಚಲಾಯಿಸಿದ್ದಾರೆ.
ಶೇ 97.81ರಷ್ಟು ಮತದಾನವಾಗಿತ್ತು. ಚುನಾವಣಾ ಕಣದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಒಟ್ಟು ನಾಲ್ವರು ಅಭ್ಯರ್ಥಿಗಳಿದ್ದಾರೆ. ಒಂದು ಸ್ಥಾನ ಯಾವ ಪಕ್ಷದ ಮಡಿಲಿಗೆ ಎಂದು ಕಾದು ನೋಡಬೇಕಿದೆ. ಚುನಾವಣಾ ಕಣದಲ್ಲಿ ಬಿಜೆಪಿಯ ಕಿಶೋರ್ ಬಿ. ಆರ್., ಕಾಂಗ್ರೆಸ್ನ ರಾಜು ಪೂಜಾರಿ, ಎಸ್ಡಿಪಿಐನ ಅನ್ವರ್ ಸಾದತ್, ಪಕ್ಷೇತರ ಅಭ್ಯರ್ಥಿಯಾಗಿ ದಿನಕಲ್ ಉಳ್ಳಾಲ ಇದ್ದಾರೆ. ಬಿಜೆಪಿ ನಾಯಕನ ರಾಜೀನಾಮೆಯಿಂದ ತೆರವಾದ ಸ್ಥಾನ ಯಾವ ಪಕ್ಷದ ಪಾಲಾಗಲಿದೆ? ಎಂದು ಕಾದು ನೋಡಬೇಕಿದೆ.
Leave a Comment